ಚಿಕ್ಕಮಗಳೂರು: ತಂಬಾಕು ಉತ್ಪನ್ನಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಿಲ್ಲೆಯಾದ್ಯಂತ ವ್ಯಾಪಕ ಪ್ರಚಾರ ಮಾಡುವ ಜೊತೆಗೆ ನಿಯಮ ಬಾಹಿರವಾಗಿ ಮಾರಾಟ ಮಾಡುವವರ ವಿರುದ್ಧ ಕಾನೂನಾತ್ಮಕ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯ ತ್ರೆÊಮಾಸಿಕ ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಿಡಿ ಸಿಗರೇಟ್ ಸೇದುವವರಿಗಿಂತಲೂ ಅವರ ಸುತ್ತಮುತ್ತಲಿನ ಅಥವಾ ಆ ಪರಿಸರದಲ್ಲಿರುವ ಸಾರ್ವಜನಿಕರ ಆರೋಗ್ಯದ ಮೇಲೆ ವ್ಯಾಪಕವಾದ ದುಷ್ಪರಿಣಾಮ ಬೀರುತ್ತದೆ. ಅಂಥವರು ಕ್ಯಾನ್ಸರ್‌ಗೆ ಬಲಿಯಾಗುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ಧೂಮಪಾನಿಗಳು ಸೇರಿದಂತೆ ಇತರರ ಮೇಲು ಯಾವುದೇ ರೀತಿ ದುಷ್ಪರಿಣಾಮ ಬೀರದಂತೆ ತಂಬಾಕು ಕೆಡುಕುಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.
ದೇವಸ್ಥಾನದ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಂಬಾಕು ಸೇವನೆಯ ಹಾನಿ ಬಗ್ಗೆ ಬ್ಯಾನರ್ ಅಳವಡಿಸಬೇಕು ಸಾರ್ವಜನಿಕರಲ್ಲಿ ತಂಬಾಕಿನ ಉತ್ಪನ್ನಗಳಿಂದ ಆಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಬೇಕು. ಕರಪತ್ರಗಳನ್ನು ವಿತರಿಸಬೇಕು. ಶಾಲಾ ಕಾಲೇಜು ಆವರಣಗಳಲ್ಲಿ ೧೦೦ ಮೀಟರ್ ಪ್ರದೇಶ ವ್ಯಾಪ್ತಿಯಲ್ಲಿ ತಂಬಾಕು ಸೇವನೆ ಹಾಗೂ ಮಾರಾಟ ನಿಷೇಧಿಸಿರುವ ಕಾರಣ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ. ಭರತ್ ಕುಮಾರ್ ಸಭೆಗೆ ಮಾಹಿತಿ ನೀಡಿ, ತಂಬಾಕು ನಿಯಂತ್ರಣ ಕಾನೂನು ಕೋಟ್ಪಾ ಕಾಯ್ದೆ ಅಡಿ ಚಿಕ್ಕಮಗಳೂರು ತಾಲೂಕಿನಲ್ಲಿ ೧೫೮, ಕಡೂರು ೧೫೪, ತರೀಕೆರೆ ೧೫೦, ಮೂಡಿಗೆರೆ ೮೧, ಕೊಪ್ಪ ೩೮, ಶೃಂಗೇರಿ ೬೪ ಹಾಗೂ ಎನ್ ಆರ್ ಪುರ ೭೨ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ೭೧೭ ಪ್ರಕರಣಗಳನ್ನು ದಾಖಲಿಸಿ ಒಟ್ಟು ೮೬,೨೦೦ ರೂ. ದಂಡ ವಿಧಿಸಲಾಗಿದೆ. ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಅಂಗಡಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಆರೋಗ್ಯ ಇಲಾಖೆ ಎಚ್ಚರಿಕೆ ಫಲಕಗಳನ್ನು ಆಳವಡಿಸಲಾಗಿದೆ. ಭಿತ್ತಿಪತ್ರಗಳ ಮೂಲಕ ನಗರ, ಪಟ್ಟಣ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.
ಜಿಲ್ಲಾ ಆರ್‌ಸಿಎಚ್ ಡಾ. ಎಚ್.ಕೆ.ಮಂಜುನಾಥ್ ಮಾತನಾಡಿ, ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ಡೆಂಘೆ ಪ್ರಕರಣಕ್ಕೆ ಸಂಬAಧಿಸಿದAತೆ ಚಿಕ್ಕಮಗಳೂರು ತಾಲೂಕಿನಲ್ಲಿ ೨,೭೩೯, ಕಡೂರು ೫೫೮, ತರೀಕೆರೆ ೬೫೦, ಎನ್.ಆರ್.ಪುರ ೨೬೦, ಕೊಪ್ಪ ೩೬೩, ಶೃಂಗೇರಿ ೩೯೮ ಹಾಗೂ ಮೂಡಿಗೆರೆ ೪೬೭ ಜ್ವರದ ಲಕ್ಷಣಗಳು ಕಂಡು ಬಂದಿವೆ. ಒಟ್ಟು ೫,೪೩೫ ರೋಗಿಗಳ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷಿಸಲಾಗಿದೆ. ಇವುಗಳಲ್ಲಿ ೬೬೩ ಡೆಂಘೆ ಪ್ರಕರಣ ದೃಢಪಟ್ಟಿದೆ. ೬೪೮ ರೋಗಿಗಳು ಗುಣಮುಖರಾಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ ೧೫ ಸಕ್ರಿಯ ಡೆಂಘೆ ಪ್ರಕರಣಗಳಿವೆ ಎಂದು ವಿವರಿಸಿದರು.
ಸಭೆಯಲ್ಲಿ ಜಿಪಂ ಸಿಇಒ ಎಚ್.ಎಸ್.ಕೀರ್ತನಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್ ಬಾಬು, ಜಿಲ್ಲಾ ಸರ್ಜನ್ ಡಾ. ಮೋಹನ್ ಕುಮಾರ್, ಎಎಸ್‌ಪಿ ಕೃಷ್ಣಮೂರ್ತಿ, ವೈದ್ಯ ಡಾ. ಬಾಲಕೃಷ್ಣ ಮತ್ತಿತರರಿದ್ದರು.