ಹಿರೇಕೆರೂರ: ಜಿಲ್ಲೆಯಲ್ಲಿ ನಕಲಿ ಬಿತ್ತನೆ ಬೀಜ ಮಾರಾಟ ಮಾಡಲು ದಾಸ್ತಾನು ಮಾಡಿದ್ದ ಕಂಪನಿಗಳ, ವರ್ತಕರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಾಲೂಕು ಉತ್ತರ ಕರ್ನಾಟಕ ರೈತ ಸಂಘದಿಂದ ಪಟ್ಟಣದಲ್ಲಿ ತಹಸೀಲ್ದಾರ್ ರಿಯಾಜುದ್ದಿನ್ ಭಾಗವಾನ್ ಮೂಲಕ ಗುರುವಾರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಸಂಘದ ಜಿಲ್ಲಾ ಅಧ್ಯಕ್ಷ ಹನುಮಂತ ದಿವಗೀಹಳ್ಳಿ ಮಾತನಾಡಿ, ಹಾವೇರಿ ಜಿಲ್ಲೆ ಬೀಜೋತ್ಪಾದನೆಯಲ್ಲಿ ಹೆಸರುವಾಸಿಯಾಗಿದೆ. ಆದರೆ, ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕಳಪೆ ಬೀಜಗಳ ಉತ್ಪಾದನೆ ಹೆಚ್ಚಾಗುತ್ತಿದೆ. ಇದರಿಂದ ಹೆಸರಾಂತ ಗುಣಮಟ್ಟದ ಕಂಪನಿಗಳ ಬೀಜೋತ್ಪಾದನೆ ಕುಂಠಿತಗೊಂಡಿದ್ದು, ಅವು ಬೇರೆ ರಾಜ್ಯಗಳತ್ತ ಹೊರಟಿವೆ. ಕೃಷಿ ಸಚಿವರ ಆದೇಶದಂತೆ ಕೃಷಿ, ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ ನಕಲಿ ಬೀಜಗಳನ್ನು ವಶಪಡಿಸಿಕೊಂಡಿರುವುದು ಶ್ಲಾಘನೀಯ. ಇಂಥ ಬೀಜಗಳನ್ನು ನಾಶಪಡಿಸಬೇಕು ಹಾಗೂ ಇಂತಹ ಕೃತ್ಯಗಳಲ್ಲಿ ತೊಡಗಿದ್ದ ಕಂಪನಿಗಳ, ವರ್ತಕರ ಮೇಲೆ ಕ್ರಮಿನಲ್ ಮೊಕದ್ದಮೆ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಜಗದೀಶ ಕುಸಗೂರು, ಚಂದ್ರಪ್ಪ ಮಾನೇರ, ಬಸವರಾಜ ಕೋಡಿಹಳ್ಳಿ, ಸುರೇಶ ಎರಳ್ಳಿ ಹಾಗೂ ಮತ್ತಿತರರು ಇದ್ದರು.