ಮೈಸೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಪಟ್ಟು ಹಿಡಿದಿರುವ ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ತಿರುಗೇಟು ನೀಡಲು ಸಿದ್ಧತೆ ಕೈಗೊಂಡಿರುವ ಸಿದ್ದರಾಮಯ್ಯ, ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಹಗರಣಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಎಚ್ಚರಿಕೆ ರವಾನಿಸಿದ್ದಾರೆ.
ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಾಗೂ ಜೆಡಿಎಸ್ ನಾಯಕರು ನಡೆಸಿರುವ ಅಕ್ರಮಗಳ ಕುರಿತು ತನಿಖೆ ನಡೆಯುತ್ತಿದ್ದು, ತನಿಖಾ ವರದಿ ಬಂದ ಕೂಡಲೇ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು. ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿ ಕಪ್ಪು ಮಸಿ ಬಳಿದು ರಾಜಕೀಯವಾಗಿ ನನ್ನನ್ನು ಅಳಿದರೆ ನಮಗೆ ಅನುಕೂಲವಾಗುತ್ತದೆ ಎಂಬ ಭ್ರಮೆಯಲ್ಲಿ ಅವರು ಇದ್ದಾರೆ. ನಾನು ಅವರ ಹಗರಣವನ್ನೂ ಬಹಿರಂಗ ಮಾಡುತ್ತೇವೆ. ಜನಾಂದೋಲನ ಸಮಾವೇಶದಲ್ಲಿ ಅವರ ಕೆಲವು ಹಗರಣಗಳನ್ನು ತೆರೆದಿಟ್ಟಿದ್ದೇನೆ. ಇನ್ನು ಕೆಲವು ವಿಚಾರಣೆ ಹಂತದಲ್ಲಿದ್ದು, ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್‌ನ ನಾಯಕರ ವಿರುದ್ಧ ಹಲವು ಹಗರಣಗಳು ತನಿಖೆ ನಡೆಯುತ್ತಿದ್ದು, ತನಿಖಾ ವರದಿ ಆಧಾರಿಸಿ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದು ಗುಡುಗಿದರು.
ಬಿಜೆಪಿ ಹಾಗೂ ಜೆಡಿಎಸ್ ಹಮ್ಮಿಕೊಂಡಿರುವ ಪಾದಯಾತ್ರೆ ಸುಳ್ಳು ಎಂಬುದನ್ನು ಜನರಿಗೆ ತಿಳಿಸುವ ಸಲುವಾಗಿ ಜನಾಂದೋಲನ ಸಮಾವೇಶ ನಡೆಸಿದೆವು. ಸುಳ್ಳು ಆರೋಪಗಳನ್ನು ಇಟ್ಟುಕೊಂಡು ಅವರು ಪಾದಯಾತ್ರೆ ನಡೆಸಿದ್ದಾರೆ. ಜನರ ಆಶೀರ್ವಾದದಿಂದ ರಚನೆಯಾದ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರ ಬೆದರಿಕೆಗೆ ನಾನು ಹೆದರುವುದಿಲ್ಲ. ಅವರು ಮಾಡಿರುವ ಆರೋಪಗಳು ಸುಳ್ಳು ಎಂಬುದು ಜನರಿಗೆ ಗೊತ್ತಾದರೆ ಜನರೇ ಅವರನ್ನು ಹತ್ತಿಕ್ಕುತ್ತಾರೆ. ಅವರ ಆರೋಪಗಳಿಗೆ ಸಂಬಂಧಿಸಿದಂತೆ ರಾಜಕೀಯವಾಗಿ ಹಾಗೂ ಕಾನೂನಾತ್ಮಕವಾಗಿ ಹೋರಾಟ ನಡೆಸುತ್ತೇವೆ ಎಂದರು.