ಇಳಕಲ್ಲ: ನಗರಸಭೆಯ 2025-26ನೇ ಸಾಲಿನ ಬಜೆಟ್‌ನಲ್ಲಿ ಸಾರ್ವಜನಿಕರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಂಡು ಆಯವ್ಯಯ ಮಂಡಿಸಲಾಗುತ್ತದೆ ಎಂದು ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ ತಿಳಿಸಿದರು.
ನಗರಸಭೆಯಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಭೆಯಲ್ಲಿ ಸಾರ್ವಜನಿಕರು, ಸಂಘಸಂಸ್ಥೆಗಳ ಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಿ ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ. ಅವುಗಳನ್ನು ಹಣಕಾಸಿನ ಮಿತಿಯೊಳಗೆ ಸಾಧ್ಯವಾದಷ್ಟು ಜಾರಿಗೊಳಿಸಲು ಪ್ರಯತ್ನಿಸಲಾಗುವುದು ಎಂದರು.
ತೆರಿಗೆ ಸಲಹೆಗಾರ ಪ್ರಶಾಂತ ಹಂಚಾಟೆ ಮಾತನಾಡಿ, ನಗರದ ಸ್ಮಶಾನ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಬೇಕೆಂದು ಮನವಿ ಮಾಡಿಕೊಂಡರು.
ನಗರಸಭೆ ಪೌರಾಯುಕ್ತ ಶ್ರೀನಿವಾಸ್ ಜಾಧವ ಮಾತನಾಡಿ, ಹೊಸದಾಗಿ ಆರೋಗ್ಯ ನಿಧಿ ಕಾಯ್ದಿರಿಸಲು ನಮ್ಮ ಆಡಳಿತ ಮಂಡಳಿ ತೀರ್ಮಾನ ಮಾಡಿದೆ. ನಗರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವುದರ ಜತೆಗೆ ನಗರ ಸಭೆಗೆ ಹೆಚ್ಚಿನ ಆದಾಯ ಬರುವಂತೆ ಮೂಲಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.
ನಗರಸಭೆ ಉಪಾಧ್ಯಕ್ಷೆ ಕಾಳಮ್ಮ ಜಕ್ಕಾ, ನಗರಸಭೆ ಸದಸ್ಯೆ ಸುರೇಶ ಜಂಗ್ಲಿ, ಅಮೃತ ಬಿಜಲ, ಲಕ್ಷ್ಮೀ ಬಾಯಿ ಹಾದಿಮನಿ, ಶರಣಮ್ಮ ತಿಮ್ಮಾಪುರ, ಹನಮಂತ ತುಂಬದ, ಯಲ್ಲಪ್ಪ ಪೂಜಾರಿ, ಮಲ್ಲು ಮಡಿವಾಳರ, ಅಬ್ಬು ಹಳ್ಳಿ, ರಾದೇಶ್ಯಾಮ ಧರಕ, ಪ್ರಶಾಂತ ಹಂಚಾಟೆ, ಟಿ.ಎಚ್. ಕುಲಕರ್ಣಿ, ಜಿ.ವಿ. ಹಿರೇಮಠ ಮತ್ತಿತರರಿದ್ದರು.