ಜಿಲ್ಲೆ

ಕಾನೂನಿನ ಚೌಕಟ್ಟಿನಲ್ಲೇ ಕಾರ್ಯನಿರ್ವಹಿಸಿ

ಕೋಲಾರ ಡೆಸ್ಕ್

 ಕೋಲಾರ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬ ಗಣಿ ಮತ್ತು ಕ್ವಾರಿಗಳ ಮಾಲೀಕರು ಕಾನೂನಿನ ನಿಯಮಾವಳಿಗಳನ್ನು ಪಾಲಿಸಿ, ಹದ್ದುಬಸ್ತು ಮೀರದೆ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಆರ್​.ರವಿ ಸೂಚಿಸಿದರು.

ಕೋಲಾರ ಜಿಲ್ಲಾಡಳಿತ, ಬೆಂಗಳೂರು ಪ್ರದೇಶ ಗಣಿ ಸುರಕ್ಷತಾ ಮಹಾ ನಿರ್ದೇಶನಾಲಯ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಕೋಲಾರ ಮತ್ತು ಅಪೂರ್ವ ಎಂಟರ್​ಪೆಸಸ್​ ಸಹಯೋಗದಲ್ಲಿ ಕೋಲಾರ ಜಿಲ್ಲೆಯ ಗಣಿ ಮಾಲೀಕರು, ಶಾಸನಬದ್ಧ ವ್ಯಕ್ತಿಗಳು, ಕಾರ್ಮಿಕರು ಮತ್ತು ಗಣಿ ನೌಕರರಿಗೆ ಬುಧವಾರ ಹಮ್ಮಿಕೊಂಡಿದ್ದ ಸುರಕ್ಷತಾ ಜಾಗೃತ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮೊದಲಿಗೆ ಕ್ವಾರಿಗಳ ಹಂತಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮಾಡಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಜಿಲ್ಲೆಯ ಎಲ್ಲ ಗಣಿ ಮಾಲೀಕರು ಮತ್ತು ಕಾರ್ಮಿಕರಿಗೆ ಜಿಲ್ಲಾಮಟ್ಟದಲ್ಲಿ ಸುರಕ್ಷತೆ ಮತ್ತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸರ್ಕಾರವು ಎಲ್ಲ ಯೋಜನೆಗಳನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಲು ಆದಾಯ ಮುಖ್ಯ. ಆದ್ದರಿಂದ ಗಣಿ ಮಾಲೀಕರು ತಳಮಟ್ಟದಿಂದ ಇಲಾಖೆಯನ್ನು ಬಲಿಷ್ಠಗೊಳಿಸಬೇಕು ಎಂದರು.

ಜಿಲ್ಲೆಯಲ್ಲಿ ಗಣಿ ಕಾರ್ಮಿಕರಿಗೆ ಯಾವುದೇ ಅಪಾಯಗಳು ಆಗದಂತೆ ಇನ್ನಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಮಾಲೀಕರು ಗಣಿ ಕಾಮಗಾರಿ, ಮಾಡುವಾಗ ಸ್ವತಃ ತಾವೇ ಹಾಜರಿದ್ದು, ಅವರ ಸಮಸ್ಯೆಗಳನ್ನು ಅಲಿಸಬೇಕು ಮತ್ತು ಸ್ಥಳಿಯ ಜನರೊಂದಿಗೆ ಕೆಲಸ ಮಾಡುವ ಕಾರ್ಮಿಕರೊಂದಿಗೆ ಉತ್ತಮ ಬಾಂಧವ್ಯ ಬೆಳಸಿಕೊಂಡು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದರು.

ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಾ.ಬಿ.ನಿಖಿಲ್​ ಮಾತನಾಡಿ, ಗಣಿಯ ಮಾಲೀಕರು ಹಾಗೂ ಗಣಿ ನೌಕರರು ಯಾವ ರೀತಿ ಸುರಕ್ಷತೆಯಿಂದ ಗಣಿಗಾರಿಕೆ ಮಾಡಬೇಕು ಎಂಬುದು ಈ ಕಾರ್ಯಾಗಾರದ ಉದ್ದೇಶವಾಗಿದೆ. ಪ್ರತಿನಿತ್ಯ ಗಣಿ ಕಾರ್ಮಿಕರಿಗೆ ಆಗುತ್ತಿರುವ ತೊಂದರೆಗಳನ್ನು ಮಾಲೀಕರು ಸ್ಥಳದಲ್ಲಿದ್ದು ತಿಳಿದುಕೊಳ್ಳಬೇಕು. ಸುರಕ್ಷತಾ ಬಗ್ಗೆ ಕಾಳಜಿ ವಹಿಸದಿದ್ದರೆ, ಸಮಸ್ಯೆಗಳು ಆಗುತ್ತವೆ. ಆದ್ದರಿಂದ ಮಾಲೀಕರು ಮತ್ತು ಕಾರ್ಮಿಕರು ಎಚ್ಚರವಹಿಸಬೇಕು ಎಂದರು.

ಗಣಿ ಮಾಲೀಕರು ಮತ್ತು ಕಾರ್ಮಿಕರೊಂದಿಗೆ ಜಿಲ್ಲಾಡಳಿತ ಇರುತ್ತದೆ ತಾವು ಸಮಾಜದಲ್ಲಿ ಉತ್ತಮ ವಾತಾವರಣ ಬೆಳೆಸುವ ಗುಣವಿಟ್ಟುಕೊಳ್ಳಬೇಕು ಜೀವಹಾನಿ ಆಗದಂತೆ ನೋಡಿಕೊಳ್ಳಬೇಕು ಎಂದರು.

ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕ ಕೋದಂಡರಾಮ, ಗಣಿ ಮತ್ತು ಭೂವಿಜ್ಞಾನ ಇಲಾಖೆ ತಾಂತ್ರಿಕ ನಿರ್ದೇಶಕ ಆಮುರ್ಗಂ, ಪ್ರಧಾನ ಕಾರ್ಯದರ್ಶಿ ರಮೇಶ್​ ಗೌಡ, ಉಪಾಧ್ಯಕ್ಷ ಸತೀಶ್​ ರಾಜಣ್ಣ, ಅಪೂರ್ಣ ಎಂಟರ್​ ಪೆಸಸ್​ ವ್ಯವಸ್ಥಾಪಕ ನಿರ್ದೇಶಕ ಸಂಜೀವ್​ ರಾಜು ಇದ್ದರು.