ಜಿಲ್ಲೆ

ಮಾನವೀಯತೆಯಿಂದ ವರ್ತಿಸಿ ; ಆರ್‌ಟಿಒ ಅಧಿಕಾರಿಗೆ ಸಂಸದ ಮುನಿಸ್ವಾಮಿ ಕಿವಿಮಾತು

Kolar

ಕೋಲಾರ: ಕರೊನಾ ಹಿನ್ನೆಲೆಯಲ್ಲಿ ಟ್ಯಾಕ್ಸಿ ಚಾಲಕರ ಜೀವನ ನಿರ್ವಹಣೆ ಸಂಕಷ್ಟದಲ್ಲಿ ಸಿಲುಕಿರುವಾಗ ಮಾನವೀಯತೆ ಮೇರೆಗೆ ಬದುಕಲು ಅವಕಾಶ ಕಲ್ಪಸಿ, ಇಲಾಖೆ ಮಾನದಂಡಗಳಿಗೆ ಸಂಬಂಧಿಸಿದಂತೆ ಬಡಪಾಯಿ ಚಾಲಕರ ಬೆನ್ನ ಮೇಲೆ ಹೊಡೆಯಿರಿ, ಅದರೆ ಹೊಟ್ಟೆ ಮೇಲೆ ಹೊಡೆಯದಿರಿ ಎಂದು ಸಂಸದ ಎಸ್.ಮುನಿಸ್ವಾಮಿ ಆರ್‌ಟಿಒ ಅಧಿಕಾರಿಗೆ ಕಿವಿಮಾತು ಹೇಳಿದರು.

ನಗರದ ಸರ್ವಜ್ಞ ಉದ್ಯಾನದ ಬಳಿ ಇರುವ ಟ್ಯಾಕ್ಸಿ ಕಾರು ನಿಲ್ದಾಣಕ್ಕೆ ಸೋಮವಾರ ಭೇಟಿ ನೀಡಿ ಟ್ಯಾಕ್ಸಿ ಚಾಲಕರ ಸಮಸ್ಯೆ ಅಲಿಸಿದ ನಂತರ ಸ್ಥಳಕ್ಕೆ ಆರ್‌ಟಿಒ ಚಂದ್ರಶೇಖರ್ ಅವರನ್ನು ಕರೆಸಿ ಮಾತನಾಡಿ, ಹಳದಿ ಬೋರ್ಡ್ (ಬಾಡಿಗೆ) ಕಾರುಗಳು ಪ್ರತಿ ತಿಂಗಳು ಸರ್ಕಾರಕ್ಕೆ ತೆರಿಗೆ ಪಾವತಿಸಬೇಕು. ಬಿಳಿ ಬೋರ್ಡ್ ಕಾರ್ (ಸ್ವಂತ ಬಳಕೆಗೆ) ಮಾಲಿಕರು ಲೈಫ್ ಟ್ಯಾಕ್ಸ್ ಪಾವತಿಸಿರುತ್ತಾರೆ. ಇವುಗಳು ಬಾಡಿಗೆ ಹಿಡಿದರೆ ಹಳದಿ ಬೋರ್ಡ್ ಇರುವ ಬಾಡಿಗೆ ಕಾರುಗಳಿಗೆ ನಷ್ಟವಾಗುವುದು ನಿಜ. ಇಷ್ಟು ದಿನ ನಿಲ್ದಾಣದಲ್ಲಿ ಬಾಡಿಗೆ ಮತ್ತು ಸ್ವಂತ ಬಳಕೆಯ ಕಾರು ಮಾಲೀಕರು ಹೇಗೆ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದರೀ ಅದೇ ರೀತಿ ಒಂದೇ ಕುಟುಂಬದವರಂತೆ ಮುಂದುವರಿಯಬೇಕು ಎಂದರು.

ಕರೊನಾ ಹಿನ್ನೆಲೆಯಲ್ಲಿ ಬಸ್‌ಗಳಲ್ಲಿ ನಿಗದಿತ ಮಂದಿ ಪ್ರಯಾಣಿಸಲು ಅವಕಾಶವಿರುವುದರಿಂದ ಸಮಸ್ಯೆಯಾಗುತ್ತಿದೆ. ಗ್ರಾಮೀಣ ಭಾಗದ ವಿದ್ಯಾವಂತರು ಉದ್ಯೋಗ ಸಿಗದೆ ಚಾಲಕ ವೃತ್ತಿ ಅವಲಂಬಿಸಿದ್ದಾರೆ. ಈ ಸಂದರ್ಭದಲ್ಲಿ ಎಲ್ಲರಿಗೂ ಜೀವನ ನಿರ್ವಹಣೆ ಕಷ್ಟವಿದ್ದು, ಈ ವರ್ಗದವರ ಬಗ್ಗೆ ಕಾಳಜಿ ಇರಲಿ. ಕೆಲವೊಮ್ಮೆ ಮಾನವೀಯತೆ ದೃಷ್ಟಿಯಿಂದ ಕಾನೂನು ಮಾನದಂಡಗಳ ಪಾಲನೆಯಲ್ಲಿ ವಿನಾಯಿತಿ ನೀಡುವುದು ಅನಿವಾರ್ಯವಾಗುತ್ತದೆ. ಹಾಗಾಗಿ ಕಾಲಾವಕಾಶ ನೀಡಿ ಎಂದು ಆರ್‌ಟಿಒ ಅಧಿಕಾರಿಯನ್ನು ಕೋರಿದರು.

ಈ ಹಿಂದೆ ಬೆಂಗಳೂರಿನಲ್ಲಿ ಟ್ಯಾಕ್ಸಿ, ಕಾರು ಮಾಲೀಕರು, ಚಾಲಕರ ಸಂಘಟನೆಯ ನಾಯಕತ್ವ ವಹಿಸಿಕೊಂಡಿದ್ದೆ. ಟ್ಯಾಕ್ಸಿಯವರ ಎಲ್ಲ ಸಮಸ್ಯೆ ನನಗೆ ಗೊತ್ತು. ನಾನು ಈವರೆಗೆ ನಿಮ್ಮ ಕಚೇರಿ ತಂಟೆಗೆ ಬಂದಿಲ್ಲ. ಕೆಜಿಎಫ್ ಆರ್‌ಟಿಒ ಕಚೇರಿಯಲ್ಲಿ ಏನೇನು ನಡೆಯುತ್ತಿದೆ ಎಂಬುದೆಲ್ಲಾ ನನಗೆ ತಿಳಿದಿದೆ. ಸಾರ್ವಜನಿಕರಿಗೆ, ವಾಹನ ಚಾಲಕರಿಗೆ ವಿನಾಕಾರಣ ತೊಂದರೆ ಕೊಟ್ಟರೆ ಇನ್ನು ಮುಂದೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.

ವಾಹನ ಚಾಲಕರಿಗೆ ನಿಲ್ದಾಣಕ್ಕೆ ಈ ಸ್ಥಳವನ್ನು ಬದಲಾಯಿಸಿ ಸೂಕ್ತ ಸ್ಥಳ ಗೊತ್ತು ಪಡಿಸಲಾಗುವುದು, ಮೂಲಸೌಲಭ್ಯ ಕಲ್ಪಿಸಲಾಗುವುದು ಎಂದರು. ನಗರಸಭೆ ಆಯುಕ್ತ ಶ್ರೀಕಾಂತ್, ಕುಡಾ ಅಧ್ಯಕ್ಷ ಓಂಶಕ್ತಿ ಚಲಪತಿ, ಸದಸ್ಯ ಅಪ್ಪಿ ನಾರಾಯಣಸ್ವಾಮಿ, ಕಾರು ಚಾಲಕರ ಸಂಘದ ಅಧ್ಯಕ್ಷ ಟೆಲ್ಲಿ ಮಂಜುನಾಥ್, ವಕ್ಫ್‌ಬೋರ್ಡ್ ಅಧ್ಯಕ್ಷ ಜಾಮೀಲ್‌ಖಾನ್, ನಗರಸಭೆ ಸದಸ್ಯ ಮಂಜುನಾಥ್ ಇತರರು ಇದ್ದರು.

ಕೇಸು ಹಾಕದಿರಿ: ನಿಲ್ದಾಣದಲ್ಲಿ ಹಳದಿ ಬಣ್ಣದ ಬೋರ್ಡ್ ಟ್ಯಾಕ್ಸಿಗಳು ಹೊರತುಪಡಿಸಿದರೆ ಬಿಳಿ ಬಣ್ಣದ ಬೋರ್ಡ್ ಇರುವ ಕಾರುಗಳು ನಿಲ್ಲಿಸಬಾರದೆಂಬ ಆದೇಶ ಉಲ್ಲಂಘನೆ ಹಿನ್ನೆಲೆಯಲ್ಲಿ ಆರ್‌ಟಿಒ ಅಧಿಕಾರಿಗಳು ಟ್ಯಾಕ್ಸಿ ನಿಲ್ದಾಣದಲ್ಲಿ ವೈಟ್ ಬೋರ್ಡ್ ಚಾಲಕರ ಮೇಲೆ ಕೇಸ್ ದಾಖಲಿಸಲು ಮುಂದಾದಾಗ ಸಂಸದ ಎಸ್.ಮುನಿಸ್ವಾಮಿ ಮಧ್ಯಪ್ರವೇಶಿಸಿ ಸಾರಿಗೆ ಅಧಿಕಾರಿಗಳ ಜತೆ ಚರ್ಚಿಸಿ ಕೇಸ್ ದಾಖಲಿಸದಂತೆ ಮನವಿ ಮಾಡಿದರು.

ಸಾರಿಗೆ ಆಯುಕ್ತರ ಆದೇಶದಂತೆ ಕೇಸ್ ದಾಖಲು ಮಾಡುತ್ತೇವೆ. ಹಳದಿ ಬೋರ್ಡ್ ಕಾರುಗಳು ಮಾತ್ರ ಟ್ಯಾಕ್ಸಿಯ ರೀತಿ ಚಾಲನೆ ಮಾಡಬೇಕು. ವೈಟ್ ಬೋರ್ಡಿನ ಕಾರುಗಳು ಸ್ವಂತಕ್ಕೆ ಬಳಸಬೇಕಾಗಿದ್ದು, ಅವರೂ ಪ್ರಯಾಣಿಕರನ್ನು ಹತ್ತಿಸಿಕೊಂಡು ವಂಚಿಸುತ್ತಾರೆ. ನಿಯಮ ಉಲ್ಲಂಘನೆ ಕುರಿತು ದೂರು ಬಂದ ಕಾರಣ ಕ್ರಮ ಜರುಗಿಸಲು ಬಂದಿದ್ದೇವೆ. ಚಂದ್ರಶೇಖರ್, ಆರ್‌ಟಿಒ ಅಧಿಕಾರಿ