ಜಿಲ್ಲೆ

ಚುನಾವಣಾ ಕರ್ತವ್ಯ ಆತಂಕ ಪಡದೆ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಿ

reportermys

ಮಡಿಕೇರಿ: ವಿಧಾನಸಭಾ ಚುನಾವಣೆ ಸಂಬಂಧ ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶ ಮಾಡದೆ ವ್ಯವಸ್ಥಿತವಾಗಿ ಚುನಾವಣಾ ಕಾರ್ಯ ನಿರ್ವಹಿಸುವಂತೆ ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಬಿ.ಸಿ.ಸತೀಶ ನಿರ್ದೇಶನ ನೀಡಿದರು.


ನಗರದ ಸಂತ ಜೋಸೆಫರ ಕಾಲೇಜಿನಲ್ಲಿ ಪಿಆರ್‌ಒ ಮತ್ತು ಎಪಿಆರ್‌ಗಳಿಗೆ ಆಯೋಜಿಸಿದ್ದ ಚುನಾವಣಾ ತರಬೇತಿ ಕಾರ್ಯಗಾರದಲ್ಲಿ ಪಾಲ್ಗೊಂಡು ಜಿಲ್ಲಾಧಿಕಾರಿ ಮಾತನಾಡಿದರು.


ಚುನಾವಣಾ ಕಾರ್ಯವನ್ನು ಶ್ರದ್ಧೆಯಿಂದ ನಿರ್ವಹಿಸಬೇಕು. ಯಾವುದೇ ರೀತಿಯ ಆತಂಕ ಅಥವಾ ಭಯಪಡಬಾರದು. ಚುನಾವಣಾ ಆಯೋಗದ ನಿರ್ದೇಶನದಂತೆ ವಿದ್ಯುನ್ಮಾನ ಮತಯಂತ್ರ, ವಿವಿಪ್ಯಾಟ್ ಮತ್ತಿತರ ಬಗ್ಗೆ ಮಾಹಿತಿ ಪಡೆದು ವ್ಯವಸ್ಥಿತವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.


ಜಿಲ್ಲೆಯಲ್ಲಿ ಒಟ್ಟು ೫೪೨ ಮತಗಟ್ಟೆಗಳಿದ್ದು, ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ೨೬೯ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ೨೭೩ ಮತಗಟ್ಟೆಗಳಿದ್ದು, ಮತಗಟ್ಟೆಗಳಿಗೆ ನಿಯೋಜಿಸುವ ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಚುನಾವಣಾ ತರಬೇತಿ ನೀಡಲಾಗುತ್ತಿದೆ. ಚುನಾವಣೆಗೆ ನಿಯೋಜಿಸಿರುವ ಎಲ್ಲಾ ಹಂತದ ಅಧಿಕಾರಿಗಳಿಗೆ ಅಂಚೆ ಮತದಾನಕ್ಕೆ ಅವಕಾಶವಿದ್ದು, ನಮೂನೆಯನ್ನು ವಿತರಿಸಲಾಗಿದೆ ಎಂದು ಹೇಳಿದರು.


ಚುನಾವಣೆ ಸಂಬಂಧ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿಪ್ಯಾಟ್ ನಿರ್ವಹಣೆ ಬಗ್ಗೆ ತರಬೇತಿ ಕಾರ್ಯಗಾರದಲ್ಲಿ ಪಿಆರ್‌ಒ, ಎಪಿಆರ್‌ಒ ಹಾಗೂ ಸೆಕ್ಟರ್ ಅಧಿಕಾರಿಗಳಿಂದ ಹಲವು ಮಾಹಿತಿ ಪಡೆದರು.


ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಮಾತನಾಡಿ, ವಿಧಾನಸಭಾ ಚುನಾವಣೆಗೆ ನಿಯೋಜನೆ ಆಗಿರುವ ಮತಗಟ್ಟೆ ಅಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ತಿಳಿದು ಕರ್ತವ್ಯ ನಿರ್ವಹಿಸಬೇಕು. ಸಂಶಯ ಇದ್ದಲ್ಲಿ ಸೆಕ್ಟರ್ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಿಕೊಳ್ಳಬೇಕು ಎಂದರು.


ಮಾಸ್ಟರ್ ತರಬೇತಿದಾರ ಕೆ.ಜೆ.ದಿವಾಕರ ಮಾತನಾಡಿ, ಚುನಾವಣಾ ಕರ್ತವ್ಯ ಎಂದರೆ ಕೆಲವರು ಹಿಂಜರಿಕೆ ಪಡುತ್ತಾರೆ. ಆದರೆ, ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಚುನಾವಣಾ ಕರ್ತವ್ಯವನ್ನು ಹಬ್ಬದ ರೀತಿ ಶ್ರದ್ಧೆಯಿಂದ ನಿರ್ವಹಿಸಬೇಕು. ಚುನಾವಣಾ ಆಯೋಗ ನೀಡಿರುವ ಮರ್ಗಸೂಚಿಗಳನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಯಾವುದೇ ಗೊಂದಲಗಳಿಗೆ ಅವಕಾಶ ಆಗುವುದಿಲ್ಲ. ಆ ನಿಟ್ಟಿನಲ್ಲಿ ಆತ್ಮವಿಶ್ವಾಸ ಇರಬೇಕು. ಆದರೆ, ಅತಿಯಾದ ಆತ್ಮವಿಶ್ವಾಸವೂ ಬೇಡ ಎಂದು ಹೇಳಿದ ಅವರು, ವಿದ್ಯುನ್ಮಾನ ಮತಯಂತ್ರಗಳ ನಿರ್ವಹಣೆ, ಅಣಕು ಮತದಾನ ಮತ್ತಿತರ ಸಂಬಂಧ ಮತಗಟ್ಟೆ ಅಧಿಕಾರಿಗಳು ಜಾಗೃತಿ ವಹಿಸಬೇಕು. ಚುನಾವಣಾ ಪಾವಿತ್ರ್ಯತೆ ಕಾಪಾಡಬೇಕು ಎಂದು ಹೇಳಿದರು.


ತಹಶೀಲ್ದಾರರಾದ ಕಿರಣ್ ಜಿ.ಗೌರಯ್ಯ, ಎಸ್.ಎನ್.ನರಗುಂದ, ಟಿ.ಎಂ.ಪ್ರಕಾಶ್, ಚುನಾವಣಾ ತಹಶೀಲ್ದಾರ್ ರವಿಕುಮಾರ್, ಶಾಲ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ರಂಗಧಾಮಯ್ಯ, ಸೆಕ್ಟರ್ ಅಧಿಕಾರಿಗಳು, ಪಿಆರ್‌ಒ, ಎಪಿಆರ್‌ಒ, ಇತರರು ಇದ್ದರು.