ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎನ್.ಶಿವಶಂಕರ್, ಜಿಪಂ ಸಿಇಒ ಪ್ರಕಾಶ್ ಜಿ.ಟಿ ನಿಟ್ಟಾಲಿ, ಕೆ.ಎನ್ ಅನುರಾಧಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ಅಪರ ಜಿಲ್ಲಾಧಿಕಾರಿಗಳಾದ ಎನ್. ತಿಪ್ಪೇಸ್ವಾಮಿ, ಸಂಗಪ್ಪ ಮತ್ತಿತರರು ಇದ್ದರು. 
ಜಿಲ್ಲೆ

ಹೊಣೆ ಅರಿತು ಕಾರ್ಯನಿರ್ವಹಿಸಿ

ಎನ್.ವೆಂಕಟೇಶ್


ಅಧಿಕಾರಿಗಳಿಗೆ ಡಿಸಿ ಪಿ.ಎನ್. ರವೀಂದ್ರ ಸೂಚನೆ- ಮತ ಎಣಿಕೆಗೆ ಸಕಲ ಸಿದ್ಧತೆ

ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯಕ್ಕೆ ಜಿಲ್ಲಾ ಚುನಾವಣಾಧಿಕಾರಿ ಪಿ.ಎನ್.ರವೀಂದ್ರ ನೇತೃತ್ವದಲ್ಲಿ ಪೂರ್ವ ಸಿದ್ಧತಾ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬುಧವಾರ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಅಧಿಕಾರಿಗಳನ್ನೊಳಗೊಂಡ ಸಭೆಯಲ್ಲಿ ಮತ ಎಣಿಕೆ ಕಾರ್ಯದ ಪೂರ್ವ ಚಟುವಟಿಕೆಯ ಬಗ್ಗೆ ಚರ್ಚಿಸಲಾಯಿತು.

ಮತ ಎಣಿಕೆ ಪ್ರಕ್ರಿಯೆ ಜೂ.4ರಂದು ನಡೆಯಲಿದ್ದು, ಸಂಬಂಧಪಟ್ಟ ಅಧಿಕಾರಿಗಳು ಅವರವರ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸೂಚಿಸಿದರು.
ಮತ ಎಣಿಕಾ ಕೇಂದ್ರದಲ್ಲಿ ಈಗಾಗಲೇ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಕಾರ್ಯಭಾರ ಹಂಚಿಕೆಯಾಗಿದೆ ಎಂದರು.

ಜೂ.4ರಂದು ಬೆಳಗ್ಗೆ 8ರಿಂದ ಆರಂಭ
8 ವಿಧಾನಸಭಾ ಕ್ಷೇತ್ರಗಳ 2,326 ಮತಗಟ್ಟೆಗಳಲ್ಲಿ ಮತ ಚಲಾವಣೆಗೊಂಡ ನಂತರ ವಿದ್ಯುನ್ಮಾನ ಮತ ಯಂತ್ರ (ಇವಿಎಂ)ಗಳನ್ನು ನಾಗಾರ್ಜುನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸ್ಥಾಪಿಸಿರುವ ಭದ್ರತಾ ಕೊಠಡಿಯಲ್ಲಿರಿಸಲಾಗಿದೆ.
ಜೂ.4ರಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ. 10 ಟೇಬಲ್‌ಗಳಲ್ಲಿ ಒಂದು ಸುತ್ತಿನಲ್ಲಿ ಅಂಚೆ ಮತಗಳ ಎಣಿಕೆ ನಡೆಯಲಿದೆ. ಯಲಹಂಕ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಎರಡು ಕೊಠಡಿಗಳಲ್ಲಿ, ಇತರ ಕ್ಷೇತ್ರಗಳ ಅಂಚೆ ಮತ ಹಾಗೂ ಸಾಮಾನ್ಯ ಮತ ಎಣಿಕೆ ತಲಾ ಒಂದು ಕೊಠಡಿಯಲ್ಲಿ ನಡೆಯಲಿದೆ ಎಂದು ಪಿ.ಎನ್. ರವೀಂದ್ರ ತಿಳಿಸಿದರು.


ಮೂಲಸೌಕರ್ಯ ವ್ಯವಸ್ಥೆ
ಮತ ಎಣಿಕೆ ಕಾರ್ಯಕ್ಕೆ ನಿಯೋಜಿತ ಅಧಿಕಾರಿಗಳು, ಸಿಬ್ಬಂದಿಗೆ ಹಾಗೂ ಮತ ಎಣಿಕೆ ದಿನದಂದು ಆಗಮಿಸುವ ಚುನಾವಣಾ ಅಭ್ಯರ್ಥಿಗಳು, ಏಜೆಂಟರು ಸೇರಿ ಇತರರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಕೇಂದ್ರದಲ್ಲಿ ಕುಡಿಯುವ ನೀರು, ಊಟ, ವಿದ್ಯುತ್, ಆಸನ, ಶೌಚಗೃಹ ಸೇರಿ ಅಗತ್ಯ ವ್ಯವಸ್ಥೆ, ಭದ್ರತೆಯ ಬಗ್ಗೆ ಸಲಹೆ ಸೂಚನೆಗಳನ್ನು ನೀಡಲಾಯಿತು. ಅಧಿಕೃತ ಪ್ರವೇಶ ಪತ್ರ ಪರಿಶೀಲನೆ, ಅನುಮತಿ ನೀಡುವುದು, ಮೊಬೈಲ್ ಬಳಕೆಗೆ ನಿರ್ಬಂಧ ನಿಯಮಗಳ ಬಗ್ಗೆ ಸಭೆಯಲ್ಲಿ ವಿವರಿಸಲಾಯಿತು. ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ ನಿರ್ಬಂಧ, ಮತ ಎಣಿಕೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ಕೇಂದ್ರದ ಮುಂಭಾಗದ ರಸ್ತೆಯಲ್ಲಿ ಸಂಚಾರ ದಟ್ಟಣೆ ನಿಯಂತ್ರಣ, ವಾಹನಗಳ ನಿಲುಗಡೆ, ಕೇಂದ್ರದಲ್ಲಿ ಆಂಬುಲೆನ್ಸ್ ವ್ಯವಸ್ಥೆ ಬಗ್ಗೆ ಚರ್ಚಿಸಲಾಯಿತು. ಅಗತ್ಯ ವೈದ್ಯಕೀಯ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ತಾತ್ಕಾಲಿಕ ಹೆಲ್ತ್ ಸೆಂಟರ್ ಸ್ಥಾಪನೆ, ಅಗ್ನಿಶಾಮಕ ವಾಹನವನ್ನು ಅಗತ್ಯ ಸಿಬ್ಬಂದಿಯೊಂದಿಗೆ ಮೀಸಲಿಡಲು ಜಿಲ್ಲಾ ಚುನಾವಣಾಧಿಕಾರಿಗಳು ಸೂಚಿಸಿದರು.

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಪಿ.ಎನ್.ರವೀಂದ್ರ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎನ್.ಶಿವಶಂಕರ್, ಜಿಪಂ ಸಿಇಒ ಪ್ರಕಾಶ್ ಜಿ.ಟಿ ನಿಟ್ಟಾಲಿ, ಕೆ.ಎನ್, ಅನುರಾಧಾ ಮತ್ತಿತರರು ಇದ್ದರು.