ಮುದ್ದೇಬಿಹಾಳ: ಸಂವಿಧಾನದ ಆಶಯದಂತೆ ನಾವೆಲ್ಲರೂ ನಡೆದುಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದರೆ ಅದೇ ನಾವು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಕೊಡುವ ಗೌರವವಾಗಿದೆ ಎಂದು ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಹೇಳಿದರು.
ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ತಾಲೂಕು ಆಡಳಿತ, ದಲಿತ ಸಂಘಟನೆಗಳ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಪ್ರತಿಯೊಬ್ಬನ ಹಕ್ಕು. ಶಿಕ್ಷಣದಿಂದಲೇ ಬದಲಾವಣೆ ಸಾಧ್ಯ. ಎಲ್ಲರಿಗೂ ಶಿಕ್ಷಣ ಒದಗಿಸುವ ಜವಾಬ್ಧಾರಿ ಸರ್ಕಾರದ್ದು. ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರ ಈ ದಿಸೆಯಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿದೆ. ವಂಚಿತ ಸಮಾಜಗಳನ್ನು ಗುರುತಿಸಿ ಜನಸಂಖ್ಯೆ ಆಧಾರದಲ್ಲಿ ನ್ಯಾಯ ಕೊಡಿಸುವ ಕೆಲಸ ಮಾಡುತ್ತಿದೆ. ಮೀಸಲಾತಿ ಅಗತ್ಯ. ಆದರೆ ರಾಜಕೀಯ ಕಾರಣಗಳಿಗಾಗಿ ಮೀಸಲಾತಿ ಅಗತ್ಯವಿಲ್ಲ ಅನ್ನೋದು ನನ್ನ ವೈಯುಕ್ತಿಕ ಅಭಿಪ್ರಾಯ ಎಂದರು.
ಮುಖಂಡ ಶಾಂತಗೌಡ ಪಾಟೀಲ ಮಾತನಾಡಿದರು.
ಪುರಸಭೆ ಅಧ್ಯಕ್ಷ ಮಹೆಬೂಬ್ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಸದಸ್ಯೆ ಪ್ರತಿಭಾ ಅಂಗಡಗೇರಿ, ಮುಖ್ಯಾಧಿಕಾರಿ ಮಲ್ಲಿಕಾರ್ಜುನ ಬಿರಾದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ನಾನಪ್ಪ ನಾಯಕ, ದಲಿತ ಸಂಘಟನೆ ಮುಖಂಡ ಅಶೋಕ ಇರಕಲ್ಲ, ತಹಸೀಲ್ದಾರ್ ಬಲರಾಮ ಕಟ್ಟಿಮನಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎನ್.ಎಸ್. ಮಸಳಿ, ಸಿಪಿಐ ಮೆಹಮ್ಮೂದ್ ಸಿಯುದ್ದೀನ್, ಬಿಇಒ ಬಿ.ಎಸ್. ಸಾವಳಗಿ ಇತರರಿದ್ದರು.
ಸಮಾಜ ಕಲ್ಯಾಣ ಗ್ರೇಡ್-2 ಸಹಾಯಕ ನಿರ್ದೇಶಕಿ ಬಸಂತಿ ಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈ.ಎಚ್. ವಿಜಯಕರ್ ಸ್ವಾಗತಿಸಿದರು. ಟಿ.ಡಿ. ಲಮಾಣಿ ನಿರೂಪಿಸಿ, ವಂದಿಸಿದರು.
ಇದಕ್ಕೂ ಮುನ್ನ ಅಂಬೇಡ್ಕರ್ ವೃತ್ತದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಅಂಬೇಡ್ಕರ್ ಅವರ ಪುತ್ಥಳಿಗೆ ಹೂಮಾಲೆ ಹಾಕಿ ಗೌರವಿಸಲಾಯಿತು. ಅಧಿಕಾರಿಗಳು, ನೌಕರರು, ದಲಿತ ಸಂಘಟನೆಗಳ ಸದಸ್ಯರು ಪಾಲ್ಗೊಂಡಿದ್ದರು.