ಜಿಲ್ಲೆ

ತ್ವರಿತ ಪರಿಹಾರಕ್ಕೆ ಕ್ರಮವಹಿಸಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸಿಗಬೇಕಾದ ಸೌಲಭ್ಯ ತಲುಪಿಸಿ, ದೌರ್ಜನ್ಯ ಪ್ರಕರಣಗಳಲ್ಲಿ ನಿಯಮಾನುಸಾರ ತ್ವರಿತ ಪರಿಹಾರ ನೀಡಲು ಸಮಾಜ ಕಲ್ಯಾಣ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ದೌರ್ಜನ್ಯ ತಡೆ ಕಾಯಿದೆ ಪ್ರಗತಿ ಪರಿಶೀಲನೆ, 2023ನೇ ಸಾಲಿನ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ 3ನೇ ತ್ರೈ ಮಾಸಿಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೌರ್ಜನ್ಯದಲ್ಲಿ ಕೊಲೆಯಾದ ವ್ಯಕ್ತಿಗಳ ಅವಲಂಬಿತರಿಗೆ ನೀಡುವ ಅನುಕಂಪ ಆಧಾರದ ನೇಮಕಾತಿ ಪ್ರಕರಣಗಳಲ್ಲಿ ಇಲಾಖೆ ಅಧಿಕಾರಿಗಳು ಸಮನ್ವಯ ಸಾಧಿಸಿ, ಪ್ರಕರಣಗಳನ್ನು ಬೇಗ ಇತ್ಯರ್ಥ ಮಾಡಬೇಕು. ನೇಮಕಾತಿಗೆ ಅಗತ್ಯ ದಾಖಲೆ ಪೂರೈಸಲು ತುರ್ತು ಕ್ರಮವಹಿಸಬೇಕು. ಜಿಲ್ಲಾ ಜಾಗೃತಿ ಸಮಿತಿ ಸದಸ್ಯರು ಸೇರಿ ಗ್ರಾಮ ಮಟ್ಟದಲ್ಲಿ ಎಸ್‌ಸಿ, ಎಸ್‌ಟಿ, ದೌರ್ಜನ್ಯ ತಡೆ ಕಾಯಿದೆ, ಸಮುದಾಯ ಅಭಿವೃದ್ಧಿಗೆ ಮೀಸಲಿರುವ ಅನುದಾನ, ನಿವಾಸಿಗಳ ಪ್ರದೇಶದಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರದ ಯೋಜನೆಗಳ ಕುರಿತು ಸಮಾಜ ಕಲ್ಯಾಣ ಹಾಗೂ ಕಂದಾಯ ಇಲಾಖೆಯಿಂದ ಜಾಗೃತಿ ಮೂಡಿಸಬೇಕು ಎಂದರು.
ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯಿದೆ ಅಡಿ ದಾಖಲಾಗಿರುವ ಪ್ರಕರಣಗಳು ನ್ಯಾಯಾಲಯದಲ್ಲಿ ಬೇಗ ಮುಕ್ತಾಯವಾಗಬೇಕು. ನೊಂದವರಿಗೆ ನ್ಯಾಯ ದೊರಕಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಪಿಎಫ್, ಇಎಸ್‌ಐ ಸೌಲಭ್ಯ ಸಿಗುವಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ, ಉಪಪೋಲಿಸ್ ಆಯುಕ್ತ ರಾಜೀವ ಎಂ., ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಜಿಪಂ ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ, ಡಿಎಚ್‌ಒ ಡಾ. ಪಾಟೀಲ ಶಶಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೆ.ಸಿ.ಭದ್ರಣ್ಣವರ, ಕೃಷಿ ಇಲಾಖೆ ಉಪ ನಿರ್ದೇಶಕ ಜಯಶ್ರೀ ಹಿರೇಮಠ, ತಹಸೀಲ್ದಾರರಾದ ಪ್ರಕಾಶ ನಾಶಿ, ಯಲ್ಲಪ್ಪ ಗೊಣೆನ್ನವರ, ದೊಡ್ಡಪ್ಪ ಹೂಗಾರ, ಶಿವಾನಂದ ಹೆಬ್ಬಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಲಲಿತಾ ಹಾವೇರಿ, ಮಾಲಾ ತುರಿಹಾಳ, ಇತರರು ಇದ್ದರು.