ಜಿಲ್ಲೆ

ಬಿರುಸಿನ ಮಳೆಗೆ ಎಕರೆಗಟ್ಟಲೆ ತೋಟಕ್ಕೆ ಬಿದ್ದ ಮಣ್ಣು

ಕಾಸರಗೋಡು: ಬಿರುಸಿನ ಮಳೆಗೆ ಕಾರಡ್ಕ ಮೂರನೇ ವಾರ್ಡಿನ ಪುಂಡಿಕಾಯಿ ಬಯಲಿಗೆ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದು ಬಿದ್ದು, ಹಲವು ಎಕರೆ ಪ್ರದೇಶ ತೋಟ ಹಾನಿಗೀಡಾಗಿದೆ. ಪುಂಡಿಕಾಯಿ ಬಯಲಿನ ಗೋಪಾಲ ಮಣಿಯಾಣಿ ಎಂಬುವರ ಮನೆ ಸನಿಹದ ಗುಡ್ಡ ಕುಸಿದು ನೀರು ಹರಿಯುವ ತೋಡು ಮಣ್ಣಿನಿಂದ ತುಂಬಿಕೊಂಡಿದೆ. ಮಳೆನೀರು ಸಂಪೂರ್ಣ ಕೃಷಿ ಭೂಮಿಯಲ್ಲಿ ಹರಿಯುತ್ತಿದ್ದು, ರಬ್ಬರ್, ಅಡಕೆ, ತೆಂಗಿನ ಕೃಷಿಗೆ ಹಾನಿಯುಂಟಾಗಿದೆ.

ಪುತ್ತಿಗೆ ಅಂಗಡಿಮೊಗರು ಶಾಲೆ ಸನಿಹ ಗುಡ್ಡ ಕುಸಿದು ರಸ್ತೆಗೆ ಮಣ್ಣು ಬಿದ್ದು ವಾಹನ ಸಂಚಾರಕ್ಕೆ ಸಮಸ್ಯೆ ಎದುರಾಗಿದೆ. ತಕ್ಷಣ ಜೆಸಿಬಿ ಬಳಸಿ ಮಣ್ಣು ತೆರವುಗೊಳಿಸಲಾಗಿದ್ದರೂ, ಮಳೆ ಬಿರುಸುಗೊಂಡಲ್ಲಿ ಮತ್ತೆ ಗುಡ್ಡ ಕುಸಿಯುವ ಭೀತಿಯಲ್ಲಿದೆ. ಕುಂಬಳೆ ಕೊಯಿಪ್ಪಾಡಿ ರಸ್ತೆಯ ರೈಲ್ವೆ ಅಂಡರ್‌ಪ್ಯಾಸೇಜ್‌ನಲ್ಲಿ ನೀರು ತುಂಬಿಕೊಂಡು ಕೊಯಿಪ್ಪಾಡಿ ಭಾಗಕ್ಕೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ ಶಾಲಾ ವಾಹನಗಳಿಗೂ ತೆರಳಲಾಗದೆ, ಕೆಲವು ವಿದ್ಯಾರ್ಥಿಗಳಿಗೆ ಶಾಲೆಗೆ ತಲುಪಲು ಸಾಧ್ಯವಾಗಿರಲಿಲ್ಲ.

ಬೇವಿಂಜೆಯಲ್ಲಿ ಭೂಕುಸಿತ

ಕಾಸರಗೋಡು ಮುಳ್ಳೇರಿಯ ರಾಷ್ಟ್ರೀಯ ಹೆದ್ದಾರಿಯ ಬೇವಿಂಜದಲ್ಲಿ ಭೂಕುಸಿತ ಸಂಭವಿಸಿದ ಪರಿಣಾಮ ರಸ್ತೆಯ ಕೆಳಗಡೆ ವಾಸಿಸುತ್ತಿದ್ದ ಎರಡು ಮನೆಗಳ ಬಾವಿ, ಕೊಳಗಳು ಮಣ್ಣು ಪಾಲಾಗಿವೆ. ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಮನೆಗಳಿಗೆ ಕುಡಿಯುವ ನೀರು ಪೂರೈಸಲು ಹಾಗೂ ಕುಡಿಯುವ ನೀರಿನ ಮೂಲಗಳನ್ನು ಸ್ವಚ್ಛಗೊಳಿಸುವಂತೆ ನಿರ್ಮಾಣ ಸಂಸ್ಥೆಗೆ ಸೂಚಿಸಿದೆ. ರಸ್ತೆಯ ಒಂದು ಭಾಗದಲ್ಲಿ ಭೂಕುಸಿತದಿಂದಾಗಿ ದೊಡ್ಡ ವಾಹನಗಳು ಪ್ರವೇಶಿಸುವುದನ್ನು ತಡೆಯಲಾಯಿತು. ಭೂ ಕುಸಿತದ ನಂತರ ರಸ್ತೆಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಿರ್ಮಾಣ ಕಂಪನಿ ಅಗತ್ಯ ವ್ಯವಸ್ಥೆಗಳನ್ನು ಮಾಡುತ್ತದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮಂಜೇಶ್ವರ ತಾಲೂಕಿನ ಕಣ್ವತೀರ್ಥದಲ್ಲಿ ಕಡಲ್ಕೊರೆತ ತೀವ್ರವಾಗಿದೆ ಎಂದು ವರದಿಯಾಗಿದೆ.