ಮೈಸೂರು: ಮೈಸೂರು-ನಂಜನಗೂಡು ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಮಾದರಿಯ ಬುಲೆಟ್ ಟ್ರಕ್ ಪಲ್ಟಿಯಾಗಿದ್ದು, ಅದೃವಶಾತ್ ಅದರಲ್ಲಿದ್ದ ಮೆಥಾಕ್ರಿಲಿಕ್ ಆಸಿಡ್ ಸೋರಿಕೆಯಾಗದ ಕಾರಣ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ನಂಜನಗೂಡಿನ ಏಷಿಯನ್ ಪೇಂಟ್ಸ್ ಘಟಕಕ್ಕೆ ಮೆಥಾಕ್ರಿಲಿಕ್ ಆಸಿಡ್ ಸಾಗಿಸುತ್ತಿದ್ದ 12 ಚಕ್ರದ ಬೃಹತ್ ಬುಲೆಟ್ ಟ್ರಕ್ ಗೆಜ್ಜಗಳಿಯ ವರುಣ ಮೇಲ್ಗಾಲುವೆ ಬಳಿ ಹಳ್ಳಕ್ಕೆ ಶುಕ್ರವಾರ ಉರುಳಿ ಬಿದ್ದಿದೆ. ಚಾಲಕ ಸೇರಿದಂತೆ ವಾಹನದಲ್ಲಿದ್ದವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೃಹತ್ ಟ್ರಕ್ ಚೆನ್ನೈ ಘಟಕದಿಂದ ಬಂದಿದ್ದಾಗಿ ಕಂಪನಿ ಮೂಲಗಳಿಂದ ತಿಳಿದು ಬಂದಿದೆ.
ಆದರೆ, ಅದು ಯಾವ ಮಾರ್ಗದಲ್ಲಿ ಮೈಸೂರಿಗೆ ಬಂದು ನಂಜನಗೂಡಿಗೆ ತೆರಳುತ್ತಿತ್ತು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ದೊರೆತಿಲ್ಲ. ಚೆನ್ನೈನಿಂದ ಕಂಪನಿ ಪ್ರತಿನಿಧಿಗಳು ಬಂದ ನಂತರ ಖಚಿತ ಮಾಹಿತಿ ಲಭ್ಯವಾಗಲಿದೆ.
ಅಪಾಯಕಾರಿ ಕೆಮಿಕಲ್ ತುಂಬಿರುವ ಟ್ಯಾಂಕರ್ ಪಲ್ಟಿಯಾಗಿದೆ ಎಂಬ ಮಾಹಿತಿ ದೊರೆತ ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದರು. ಟ್ಯಾಂಕರ್‌ನಿಂದ ಯಾವುದೇ ಸೋರಿಕೆ ಆಗದಿರುವುದನ್ನು ಖಚಿತಪಡಿಸಿಕೊಂಡರು. ಮುಂಜಾಗ್ರತಾ ಕ್ರಮವಾಗಿ ಎರಡು ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳದಲ್ಲೇ ಮೊಕ್ಕಾಂ ಹೂಡಿವೆ.
ಬ್ರೇಕ್ ವಿಫಲವಾಗಿ ಈ ಘಟನೆ ಸಂಭವಿಸಿರಬಹುದು. ನಾವು ಸ್ಥಳದಲ್ಲೇ ಇದ್ದು ನಿಗಾ ವಹಿಸಿದ್ದೇವೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಗುರುರಾಜ್ ತಿಳಿಸಿದರು. ಮೈಸೂರು ದಕ್ಷಿಣ ಠಾಣೆಯ ಪೊಲೀಸರು ರಸ್ತೆ ಸಂಚಾರಕ್ಕೆ ತೊಂದರೆಯಾಗದಂತೆ ಕ್ರಮ ವಹಿಸಿದ್ದರು.