ಜಿಲ್ಲೆ

ಛಲ ಇದ್ದಲ್ಲಿ ಉದ್ದೇಶಿತ ಗುರಿ ಸಾಧನೆ ಸುಲಭ ಸಾಧ್ಯ: ಕುಂತಿ ಬೋಪಯ್ಯ

ಮಡಿಕೇರಿ: ಸಾಧಿಸುವ ಛಲ ಇದ್ದರೆ ಉದ್ದೇಶಿತ ಗುರಿಯನ್ನು ಅಂದುಕೊಂಡಂತೆ ತಲುಪಲು ಸಾಧ್ಯವಿದೆ ಎಂದು ಕೂಡಿಗೆ ಕ್ರೀಡಾಶಾಲೆಯ ನಿವೃತ್ತ ಪ್ರಾಂಶುಪಾಲೆ ಕುಂತಿ ಬೋಪಯ್ಯ ಹೇಳಿದರು.


ಕೂಡಿಗೆ ಕ್ರೀಡಾಶಾಲೆಯಲ್ಲಿ ೩೬ ಸುಧೀರ್ಘ ವರ್ಷಗಳ ಕಾಲ ಶಿಕ್ಷಕಿಯಾಗಿ, ಪ್ರಾಂಶುಪಾಲೆಯಾಗಿ ಕಾರ್ಯನಿರ್ವಹಿಸಿದ್ದ ಕುಂತಿ ಬೋಪಯ್ಯ ಅವರ ಶೈಕ್ಷಣಿಕ ಸಾಧನೆ ಕುರಿತಾಗಿ ನಿರ್ಮಾಣಗೊಂಡಿರುವ ಕುಂತಿ ಟೀಚರ್ ಸಾಕ್ಷ್ಯ ಚಿತ್ರ ಪ್ರದರ್ಶನದ ಸಂದರ್ಭ ಕ್ರೀಡಾಶಾಲೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.


ಪೊಲೀಸ್, ಅಂಚೆ, ರೈಲ್ವೇಸ್, ತೆರಿಗೆ, ಕಂದಾಯ, ಅರಣ್ಯ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳಲ್ಲಿ ಕ್ರೀಡಾಶಾಲೆಯ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿದ್ದಾರೆ. ಅನೇಕರು ಕ್ರೀಡಾಕ್ಷೇತ್ರದಲ್ಲಿಯೇ ಉನ್ನತ ಸಾಧನೆ ಮಾಡಿದ್ದಾರೆ. ಇವರ ಸಾಧನೆಗೆ ಪ್ರಮುಖ ಕಾರಣವಾಗಿ ಕ್ರೀಡಾಶಾಲೆಯ ಉತ್ತಮ ಶಿಕ್ಷಣ ವ್ಯವಸ್ಥೆಯಿದೆ ಎಂದು ಹೆಮ್ಮೆಯಿಂದ ನುಡಿದರು.


ಕೂಡಿಗೆ ಕ್ರೀಡಾಶಾಲೆಯಲ್ಲಿ ಶಿಕ್ಷಣ ಮತ್ತು ಕ್ರೀಡೆಯಲ್ಲಿ ಸಾಧನೆ ಮಾಡಿದ ಅನೇಕ ವಿದ್ಯಾರ್ಥಿಗಳು ನಾಡಿನ ಇತರ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಿದ್ದಾರೆ. ಪಾಲಕರಿಗೆ, ಶಿಕ್ಷಕರಿಗೆ, ಶಾಲೆಗೆ ಕೀರ್ತಿ ತರುವಂಥ ಸಾಧನೆ ಮಾಡಿ ಎಂದೂ ಕುಂತಿ ಹಾರೈಸಿದರು.


ಕುಂತಿ ಟೀಚರ್ ಸಾಕ್ಷ್ಯ ಚಿತ್ರದ ನಿರ್ಮಾಪಕ, ನಿರ್ದೇಶಕ ಎಚ್.ಟಿ.ಅನಿಲ್ ಮಾತನಾಡಿ, ಕ್ರೀಡಾಶಾಲೆಗೆ ಸುಧೀರ್ಘ ಇತಿಹಾಸ ಇದೆಯಾದರೂ ನಾಡಿನ ಬಹುತೇಕ ಜನರಿಗೆ ಕ್ರೀಡಾಶಾಲೆಯ ಮಹತ್ವದ ಅರಿವಿಲ್ಲ. ಹೀಗಾಗಿ ಕುಂತಿ ಟೀಚರ್ ಸಾಧನೆಯೊಂದಿಗೆ ಕ್ರೀಡಾಶಾಲೆಯ ಹಿರಿಮೆಗಳನ್ನೂ ಸಾಕ್ಷ್ಯ ಚಿತ್ರದಲ್ಲಿ ದಾಖಲಿಸಲಾಗಿದೆ. ಸಾಧಕರ ಸಾಧನೆಯ ಹಿಂದಿನ ಶ್ರಮ ಬಿಂಬಿಸುವ ಇಂಥ ಚಿತ್ರಗಳು ವಿದ್ಯಾರ್ಥಿಗಳಿಗೂ ಮಾದರಿಯಾಗಿ ಮುಂದೆ ಸಾಧನೆ ತೋರಲು ಪ್ರೇರಣೆಯಾದರೆ ಚಿತ್ರ ನಿರ್ಮಾಣದ ಹಿಂದಿನ ಶ್ರಮ ಸಾರ್ಥಕ ಎಂದರು.


ಕ್ರೀಡಾಶಾಲೆಯ ಪ್ರಾಂಶುಪಾಲ ದೇವಕುಮಾರ್ ಮಾತನಾಡಿ, ಅತ್ಯುತ್ತಮವಾಗಿ ಮೂಡಿಬಂದಿರುವ ಸಾಕ್ಷ್ಯ ಚಿತ್ರ ಕ್ರೀಡಾಶಾಲೆಗೂ ಹಿರಿಮೆ ತಂದಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.


ಕಾರ್ಯಕ್ರಮದಲ್ಲಿ ಚುಟುಕು ಕವಿ ಹಾ.ತಿ.ಜಯಪ್ರಕಾಶ್, ಲೇಖಕಿ ಲೀಲಾ ದಯಾನಂದ್, ಲತಾ ಗಣಿಪ್ರಸಾದ್ ಹಾಜರಿದ್ದು ಸಾಕ್ಷ್ಯ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ೫೦ ನಿಮಿಷಗಳ ಕುಂತಿ ಟೀಚರ್ ಸಾಕ್ಷ್ಯ ಚಿತ್ರವನ್ನು ಕ್ರೀಡಾಶಾಲೆಯ ವಿದ್ಯಾರ್ಥಿಗಳಿಗೆ ಪ್ರದರ್ಶಿಸಲಾಯಿತು.