ಕುಶಾಲನಗರ: ಜಿಲ್ಲೆಯ ಏಕೈಕ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಎಂಬ ಹೆಗ್ಗಳಿಕೆಯ ಕುಶಾಲನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿಗೆ ಈ ಬಾರಿ ಶೇ.100ರಷ್ಟು ಫಲಿತಾಂಶ ಬಂದಿದೆ.
ಉತ್ತೀರ್ಣ ಆದವರ ಪೈಕಿ 100 ವಿದ್ಯಾರ್ಥಿಗಳು ವಿವಿಧ ಜಾಗತಿಕ ಕಂಪನಿಗಳಿಗೆ ನೇಮಕ ಮತ್ತು ತರಬೇತಿಗೆ ಆಯ್ಕೆಯಾಗಿದ್ದಾರೆ. ಇನ್ನು ಕೆಲವರು ಹೆಚ್ಚಿನ ವ್ಯಾಸಂಗಕ್ಕೆ ಇಚ್ಚಿಸಿದ್ದು, ಕೆಸಿಇಟಿ ಪರೀಕ್ಷೆ ಬರೆದಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ಡಾ.ಪರಶಿವಮೂರ್ತಿ ಈಚೆಗೆ ಆಯೋಜಿಸಿದ್ದ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಘಟಿಕೋತ್ಸವ ಕಾರ್ಯಕ್ರಮದಲ್ಲಿ ತಿಳಿಸಿದರು.
ಕಾಲೇಜಿನಲ್ಲಿ ನಾಲ್ಕು ವಿಭಾಗದಲ್ಲಿಯೊ ಶೇ. 100 ಫಲಿತಾಂಶ ಬಂದಿದ್ದು ಹರ್ಷದಾಯಕ ವಿಷಯ. ವಿಭಾಗದ ಮುಖ್ಯಸ್ಥರು, ಬೋಧಕ, ಬೋಧಕೇತರ ವರ್ಗ ಹಾಗೂ ಕಾಲೇಜು ಸಿಬ್ಬಂದಿ ಶ್ರಮವೇ ಇದಕ್ಕೆ ಕಾರಣ ಎಂದು ಸಂತಸ ವ್ಯಕ್ತಪಡಿಸಿದರು.
ಸಿವಿಲ್ ವಿಭಾಗದ ಮುಖ್ಯಸ್ಥ ಡಾ.ಎಸ್.ಸತೀಶ್ ಮಾತನಾಡಿದರು. ವಿದ್ಯಾರ್ಥಿಗಳ ಸಾಧನೆಗಳನ್ನು ಗೌರವಿಸುವ ಭಾಷಣಗಳು, ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ಪ್ರಶಸ್ತಿ ವಿತರಣೆ ಈ ಸಂದರ್ಭ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ತಮ್ಮ ಕಳೆದ ನಾಲ್ಕು ವರ್ಷದ ಅನುಭವಗಳನ್ನು ಹಂಚಿಕೊಂಡರು.