ಚಿಕ್ಕಮಗಳೂರು: ಶ್ರೀ ಜಯ ಚಂದ್ರಶೇಖರ ಸ್ವಾಮೀಜಿ ಕೇವಲ 45 ವರ್ಷದ ಜೀವಿತಾವಧಿಯಲ್ಲಿ ಅಪಾರ ಸಾಧನೆ ಮಾಡಿದ್ದು, ನಮಗೆ ಭಕ್ತರನ್ನು ತಯಾರು ಮಾಡುವ ಕಷ್ಟ ಇಲ್ಲದಂತೆ ಮಾಡಿದ್ದಾರೆ ಎಂದು ದೊಡ್ಡಕುರುಬರಹಳ್ಳಿ ಶ್ರೀ ಬಸವ ತತ್ವಪೀಠದ ಡಾ.ಬಸವ ಮರುಳಸಿದ್ದ ಸ್ವಾಮೀಜಿ ಬಣ್ಣಿಸಿದರು.
ನಗರ ಹೊರವಲಯದ ದೊಡ್ಡಕುರುಬರಹಳ್ಳಿ ಬಸವತತ್ವ ಪೀಠದಲ್ಲಿ ಸೋಮವಾರ ಶ್ರೀ ಜಯ ಚಂದ್ರಶೇಖರ ಸ್ವಾಮೀಜಿಯವರ 25ನೇ ಸಂಸ್ಮರಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಮಠ ಕಟ್ಟಬೇಕು ಎಂಬ ಅಪೇಕ್ಷೆ
ಸಮಾಜದ ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಮತ್ತು ಪ್ರತಿಭೆಯಿಂದ ಉನ್ನತ ಶಿಕ್ಷಣದ ಅವಕಾಶ ಪಡೆದ ವಿದ್ಯಾರ್ಥಿಗಳು ನಗರಕ್ಕೆ ಬಂದಾಗ ಹಾಸ್ಟೆಲ್ ಶುಲ್ಕ ಭರಿಸಲಾಗದೆ ವಿದ್ಯಾಭ್ಯಾಸದಿಂದ ವಂಚಿತರಾಗಬಾರದು ಎಂಬ ದೃಷ್ಟಿಯಿಂದ ಹಾಸ್ಟೆಲ್ ಕಟ್ಟಡ ನಿರ್ಮಿಸಿ ನಿರ್ಗಮಿಸಿದ್ದಾರೆ. ಪೂಜ್ಯರ ನನಸು ಮಾಡುವ ನಿಟ್ಟಿನಲ್ಲಿ ಈ ಮಠ ನಿರ್ಮಾಣ ಮಾಡುವ ಅಗತ್ಯವಿದ್ದು ಇದು ಕರ್ತವ್ಯದ ಜತೆ ಭಕ್ತರೆಲ್ಲರ ಜವಾಬ್ದಾರಿಯೂ ಹೌದು ಎಂದರು.
ಶಾಲಾ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಿ ಅದರಿಂದ ಬರುವ ಆದಾಯದಲ್ಲಿ ವಿದ್ಯಾರ್ಥಿ ನಿಲಯ ಸ್ಥಾಪಿಸಬೇಕು. ಪೀಠದ ಆವರಣದಲ್ಲಿ ಸಭಾಂಗಣ ನಿರ್ಮಿಸಿ ಮತ್ತು ಮಲೆನಾಡ ಸಂಸ್ಕೃತಿ ಹಾಗೂ ಶರಣ ಸಂಸ್ಕೃತಿ ಮಿಳಿತವಾಗಿರುವ ಮಠ ಕಟ್ಟಬೇಕು ಎಂಬ ಅಪೇಕ್ಷೆ ಇದೆ ಎಂದು ತಿಳಿಸಿದರು.
25 ವರ್ಷದ ಹಿಂದೆ ಶ್ರೀ ಜಯಚಂದ್ರಶೇಖರ ಸ್ವಾಮೀಜಿ ದೈಹಿಕವಾಗಿ ನಮ್ಮನ್ನು ಅಗಲಿದ್ದಾರೆ. ಅವರ ಶರೀರವನ್ನು ಮಣ್ಣು ಮಾಡಿಲ್ಲ, ಭಿತ್ತಿದ್ದೇವೆ ಭಕ್ತರೆಲ್ಲ ಒಗ್ಗೂಡಿ ಬೆಳೆಸಬೇಕು. ಸ್ವಾಮಿಗಳು ಭಕ್ತರ ಹೃದಯ ಸಿಂಹಾಸನದಲ್ಲಿ ಆರೂಢರಾಗಿ ಭಕ್ತರ ಅಂಗೈಯಲ್ಲಿ ಲಿಂಗಸ್ವರೂಪಿಯಾಗಿದ್ದಾರೆ. ಯಾವ ಭಕ್ತರೊಂದಿಗೆ ಹಿಂದೆ ಅವರು ಒಡನಾಟವಿಟ್ಟುಕೊಂಡು ಮಾರ್ಗದರ್ಶನ ಮಾಡಿದ್ದರೊ ಅವರೆಲ್ಲರೂ ಸಮಾಜದಲ್ಲಿ ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ ಎಂದರು.
ನೀರಸ ಮಾಡಿದ ಕರೊನಾ
ಕರೊನಾ ಕಾರಣಕ್ಕಾಗಿ ನಮ್ಮ ಜೀವನದ ಎರಡು ಪ್ರಮುಖ ಘಟ್ಟಗಳು ಅತ್ಯಂತ ನೀರಸವಾಗಿ ನೆರವೇರಿದೆ. ಈ ಮಠಕ್ಕೆ ಜು.27 ರಂದು ಪಟ್ಟಾಧಿಕಾರ ವಹಿಸಿಕೊಂಡಾಗ ಸೇರಿದ್ದು 40 ರಿಂದ 50 ಜನ ಮಾತ್ರ. ಅದಾದ ಎರಡೆ ದಿನಕ್ಕೆ ಕುವೆಂಪು ವಿವಿಗೆ ಡಾಕ್ಟರೇಟ್ ಪದವಿ ಸ್ವೀಕರಿಸಲು ಹೋದಾಗ ಶಿವಮೊಗ್ಗದಿಂದ 300 ಮಂದಿ ನಮ್ಮವರು ಬಂದಿದ್ದರು. ಆದರೆ ಕರೊನಾ ಕಾರಣಕ್ಕೆ ಒಬ್ಬರೆ ಭಾಗವಹಿಸಬೇಕಾಯಿತು. ಈ ಪ್ರಸಂಗಗಳು ಅರ್ಥಪೂರ್ಣವಾದರೂ ನೀರಸವಾಗಿ ನಡೆಯಿತೆಂಬ ಕಾರಣಕ್ಕೆ ಕರೊನಾ ಬಗ್ಗೆ ಬೇಸರವಿದೆ ಎಂದು ಡಾ.ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಹೇಳಿದರು.