ಮದ್ದೂರು ತಾಲೂಕಿನ ಟಿ.ಬಳ್ಳೇಕೆರೆ ಗ್ರೀನ್‌ವುಡ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಹಸಿರೋತ್ಸವ ಕಾರ್ಯಕ್ರಮದಲ್ಲಿ ಹೊಸಗಾವಿ ಗ್ರಾಮದ ಗೀತರಾಜು ರೈತ ದಂಪತಿಗೆ ಸಂಸ್ಥೆಯ ಅಧ್ಯಕ್ಷ ಅಕ್ಷರಂ ವೆಂಕಟೇಶ್ ಗೋವು ದಾನ ಮಾಡಿದರು. ನಾಗೇಂದ್ರಪ್ರಸಾದ್, ಬೆಟ್ಟಸ್ವಾಮಿ, ಹರ್ಷಿತಾ, ಹೊನ್ನೇಗೌಡ್ರು ಇದ್ದರು. 
ಜಿಲ್ಲೆ

ಗುಣಾತ್ಮಕ ಶಿಕ್ಷಣದಿಂದ ಉತ್ತಮ ಸಾಧನೆ

ನಾಗೇಶ ಎಸ್

ಮದ್ದೂರು: ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡಿದರೆ ರಾಷ್ಟ್ರ ಮತ್ತು ಅಂತಾಷ್ಟ್ರೀಯ ಮಟ್ಟದಲ್ಲಿ ಉನ್ನತ ಸಾಧನೆ ಮಾಡಿ ತೋರಿಸಿರುವ ಸಾಕಷ್ಟು ನಿದರ್ಶನಗಳು ಇವೆ ಎಂದು ಗ್ರೀನ್‌ವುಡ್ ಟ್ರಸ್ಟ್ ಅಧ್ಯಕ್ಷ ಅಕ್ಷರಂ ವೆಂಕಟೇಶ್ ಅಭಿಪ್ರಾಯಪಟ್ಟರು.

ತಾಲೂಕಿನ ಕೊಪ್ಪ ಹೋಬಳಿಯ ಟಿ.ಬಳ್ಳೇಕೆರೆ ಗ್ರೀನ್‌ವುಡ್ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಹಸಿರೋತ್ಸವ, ಗೋವು ದಾನ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಪಂಚದಲ್ಲಿ ವಿದ್ಯೆಗಿರುವ ಮಹತ್ವ ಬೇರೆ ಯಾವುದಕ್ಕೂ ಇಲ್ಲ. ಹಣ, ಆಸ್ತಿ, ಐಶ್ವರ್ಯಗಳನ್ನು ಕದಿಯಬಹುದು. ಆದರೆ, ವಿದ್ಯೆಯನ್ನು ಯಾರೂ ಕದಿಯಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ವ್ಯಾಸಂಗದ ಕಡೆಗೆ ಹೆಚ್ಚು ಗಮನ ನೀಡಿ ಉನ್ನತ ಹುದ್ದೆ ಅಲಂಕರಿಸುವ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೆ ಅನುಕೂಲ ಕಲ್ಪಿಸುವ ಜತೆಗೆ, ಪಾಲಕರಿಗೆ ಮತ್ತು ಶಿಕ್ಷಕರಿಗೆ ಕೀರ್ತಿ ತರಬೇಕು ಎಂದು ಕಿವಿಮಾತು ಹೇಳಿದರು.

ಗ್ರಾಮಾಂತರ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕು ಎಂಬ ಉದ್ದೇಶದಿಂದ ಗ್ರೀನ್‌ವುಡ್ ಶಾಲೆಯಲ್ಲಿ ಆರಂಭಿಸಿ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರಿಂದ ಇಲ್ಲಿನ ಸಾಕಷ್ಟು ವಿದ್ಯಾರ್ಥಿಗಳು ವೈದ್ಯಕೀಯ, ಇಂಜಿನಿಯರ್ ಸೇರಿದಂತೆ ಹಲವು ರೀತಿಯ ಉನ್ನತ ಶಿಕ್ಷಣದಲ್ಲಿ ವ್ಯಾಸಂಗ ಮಾಡುತ್ತಿರುವುದು ಸಂಸ್ಥೆಗೆ ಕೀರ್ತಿ ತಂದಿದೆ. ಶಿಕ್ಷಣದ ಜತೆಗೆ ರೈತ ಕುಟುಂಬಕ್ಕೆ ಸಂಸ್ಥೆಯ ವತಿಯಿಂದ ವರ್ಷಕ್ಕೆ ಒಂದು ಗೋವು ದಾನ ಮಾಡಿಕೊಂಡು ಬರುತ್ತಿದ್ದು, ಇದರಿಂದ ರೈತರಿಗೆ ಆರ್ಥಿಕವಾಗಿ ಅನುಕೂಲವಾಗಲಿದೆ ಎಂದು ತಿಳಿಸಿದರು.

ರೋಟರಿ ಜಿಲ್ಲಾ ಮಾಜಿ ಪ್ರಾಂತಪಾಲಕ ನಾಗೇಂದ್ರ ಪ್ರಸಾದ್ ಮಾತನಾಡಿ, ಗ್ರೀನ್‌ವುಡ್ ಶಾಲೆಯ ಅಧ್ಯಕ್ಷ ಅಕ್ಷರಂ ವೆಂಕಟೇಶ್ ಗ್ರಾಮಾಂತರ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಜತೆಗೆ, ಪ್ರತಿ ವರ್ಷ ರೈತರಿಗೆ ಗೋವು ದಾನ ಮಾಡುತ್ತಿರುವುದು ಮೆಚ್ಚುಗೆ ವಿಷಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರಶಕ್ತಿ ಪುಸ್ತಕ ತೇರು ಸಂಸ್ಥಾಪಕ ಸಂಸ್ಥಾಪಕ ರಾಜೇಶ್, ಉನ್ನತಿ ಶಿಕ್ಷಣ ಸಂಸ್ಥೆಯ ಆರ್.ರಾಜೇಶ್, ಸರ್ಕಾರಿ ಶಾಲೆಯ ಶಿಕ್ಷಕಿ ಎ.ಸಿ.ವಿದ್ಯಾಶ್ರೀ, ಪ್ರತಿಭಾನ್ವಿತ ವಿದ್ಯಾರ್ಥಿನಿ ಟಿ.ಎಸ್.ಲಕ್ಷ್ಮೀ ಅವರನ್ನು ಸಂಸ್ಥೆ ವತಿಯಿಂದ ಅಭಿನಂದಿಸಲಾಯಿತು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಬಿಇಒ ಸಿ.ಎಚ್.ಕಾಳೀರಯ್ಯ, ಸಂಸ್ಥೆಯ ಕಾರ್ಯದರ್ಶಿ ಬೆಟ್ಟಸ್ವಾಮಿ, ಮುಖ್ಯಶಿಕ್ಷಕಿ ಹರ್ಷಿತಾ ಅಕ್ಷರಂ ವೆಂಕಟೇಶ್, ಗ್ರಾಪಂ ಸದಸ್ಯರಾದ ಸುರೇಶ್, ಆನಂದ್, ರೋಟರಿ ಸಂಸ್ಥೆಯ ಹೊನ್ನೇಗೌಡ್ರು, ಮುಖಂಡ ಉಮೇಶ್ ಹಾಜರಿದ್ದರು.