ಜಿಲ್ಲೆ

ರಾಷ್ಟ್ರಮಟ್ಟದಲ್ಲಿ ಆಳ್ವಾಸ್ ಕ್ರೀಡಾಪಟುಗಳ ಸಾಧನೆ : 8ನೇ ಬಾರಿಗೆ ಮಂಗಳೂರು ವಿವಿ ಚಾಂಪಿಯನ್ : ವಿದ್ಯಾರ್ಥಿಗಳಿಂದ 2 ನೂತನ ಕೂಟ ದಾಖಲೆ

ಮೂಡುಬಿದಿರೆ: ಒಡಿಶಾದ ಕಳಿಂಗ ಕೆಐಐಟಿ ಸಂಸ್ಥೆಯಲ್ಲಿ ನಡೆದ 84ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಪುರುಷ ಹಾಗೂ ಮಹಿಳಾ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಮಂಗಳೂರು ವಿ.ವಿ. ತಂಡ ರಾಷ್ಟ್ರೀಯ ಮಟ್ಟದಲ್ಲಿ ಆಳ್ವಾಸ್ ವಿದ್ಯಾರ್ಥಿಗಳ ಸಿಂಹಪಾಲಿನ ಕೊಡುಗೆಯಿಂದ ಸತತ 8ನೇ ಬಾರಿಗೆ ಸಮಗ್ರ ಚಾಂಪಿಯನ್‌ಷಿಪ್ ಪಟ್ಟ ಮುಡಿಗೇರಿಸಿಕೊಂಡಿದೆ.

ಪುರುಷ ಹಾಗೂ ಮಹಿಳೆಯರ ಎರಡು ವಿಭಾಗದಲ್ಲಿ ಮಂಗಳೂರು ವಿ.ವಿ. 48(ಪುರುಷರ) ಹಾಗೂ 73(ಮಹಿಳೆಯರ) ಅಂಕಗಳೊಂದಿಗೆ ಒಟ್ಟು 121 ಅಂಕ ಪಡೆದು ಎರಡು ವಿಭಾಗದ ಸಮಗ್ರ ತಂಡ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಮಂಗಳೂರು ವಿ.ವಿ. ಎರಡು ವಿಭಾಗಗಳಲ್ಲಿ ಒಟ್ಟು 5 ಚಿನ್ನ, 5 ಬೆಳ್ಳಿ, 7 ಕಂಚಿನ ಪದಕದೊಂದಿಗೆ ಒಟ್ಟು 17 ಪದಕ ಪಡೆದುಕೊಂಡಿತು. ಪದಕ ವಿಜೇತ ಎಲ್ಲ ವಿದ್ಯಾರ್ಥಿಗಳು ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.

ಪದಕ ವಿವರ: ಪುರುಷರ ವಿಭಾಗದಲ್ಲಿ 5000 ಮೀ. ಓಟದಲ್ಲಿ ಗಗನ(ಪ್ರ), 20 ಕಿ.ಮೀ. ನಡಿಗೆ ಓಟದಲ್ಲಿ ಸಚಿನ್(ಪ್ರ), 800 ಮೀ. ಓಟದಲ್ಲಿ ತುಷಾರ್(ತೃ), 3000 ಮೀ. ಸ್ಟೀಪಲ್‌ಚೇಸ್‌ನಲ್ಲಿ ರೋಹಿತ್(ತೃ), 5000 ಮೀ. ಓಟದಲ್ಲಿ ಅಮಾನ್ ಕುಮಾರ್(ತೃ) ಸ್ಥಾನ ಪಡೆದರು. ಮಹಿಳೆಯರ ವಿಭಾಗದಲ್ಲಿ 3000 ಮೀ ಸ್ಟೀಪಲ್‌ಚೇಸ್‌ನಲ್ಲಿ ಮಂಜು ಯಾದವ್(ಪ್ರ), ಮ್ಯಾರಥಾನ್‌ನಲ್ಲಿ ಕೆ.ಎಂ. ಸೋನಿಯಾ(ಪ್ರ), 400 ಮೀ. ಹರ್ಡಲ್ಸ್‌ನಲ್ಲಿ ದೀಕ್ಷಿತಾ(ದ್ವಿ), ಉದ್ದ ಜಿಗಿತದಲ್ಲಿ ಸಿಂಚನಾ ಎಂ.ಎಸ್.(ದ್ವಿ), ಜಾವೆಲಿನ್‌ಥ್ರೋನಲ್ಲಿ ಸಾಕ್ಷಿ ಶರ್ಮಾ(ದ್ವಿ), ಪೋಲ್‌ವಾರ್ಟ್‌ನಲ್ಲಿ ಸಿಂಧುಶ್ರೀ ಜಿ.(ದ್ವಿ), ಹೆಪ್ಟಾತ್ಲನ್ ಕಮಲ್ಜೀತ್(ದ್ವಿ), 10000 ಮೀ. ಓಟದಲ್ಲಿ ಜ್ಯೋತಿ(ತೃ), 20 ಕಿ.ಮೀ. ನಡಿಗೆ ಓಟದಲ್ಲಿ ಕೆ.ಎಂ.ಶಾಲಿನಿ(ತೃ), ಮ್ಯಾರಥಾನ್‌ನಲ್ಲಿ ಜ್ಯೋತಿ(ತೃ), 400ಮೀ ಹರ್ಡಲ್ಸ್‌ನಲ್ಲಿ ಪ್ರಜ್ಞಾ ಕೆ.(ತೃ) ಸ್ಥಾನ ಪಡೆದರು. ಮಿಕ್ಸೆಡ್ ರಿಲೇಯಲ್ಲಿ ತೀರ್ತೆಶ್ ಶೆಟ್ಟಿ, ಅನೂಜ್, ದಿಶಾ ಹಾಗೂ ಪ್ರಜ್ಞಾ ತಂಡಕ್ಕೆ ಪ್ರಥಮ ಸ್ಥಾನ ಪಡೆದರು.

ಸಾಧಕ ಕ್ರೀಡಾಪಟುಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಭಿನಂದಿಸಿದ್ದಾರೆ.

ಬೆಸ್ಟ್ ಅಥ್ಲೆಟ್: 3000ಮೀ ಸ್ಟೀಪಲ್‌ಚೇಸ್‌ನಲ್ಲಿ ನೂತನ ಕೂಟ ದಾಖಲೆ ಮೆರೆದ ಆಳ್ವಾಸ್‌ನ ಮಂಜು ಯಾದವ್ ಮಹಿಳಾ ವಿಭಾಗದ ಬೆಸ್ಟ್ ಅಥ್ಲೆಟ್ ಗೌರವಕ್ಕೆ ಭಾಜನರಾಗಿದ್ದಾರೆ. ಈ ಕ್ರೀಡಾಕೂಟದಲ್ಲಿ ಮೊದಲ 8 ಸ್ಥಾನಗಳಿಸಿದ ಕ್ರೀಡಾಪಟುಗಳು ಖೇಲೋ ಇಂಡಿಯಾ ಗೇಮ್ಸ್‌ಗೆ ಅರ್ಹತೆ ಪಡೆದಿದ್ದಾರೆ.

ನೂತನ ಕೂಟ ದಾಖಲೆ : ಮಂಗಳೂರು ವಿ.ವಿ. ಪ್ರತಿನಿಧಿಸಿದ ಆಳ್ವಾಸ್ ವಿದ್ಯಾರ್ಥಿಗಳು 2 ನೂತನ ಕೂಟ ದಾಖಲೆ ಹಾಗೂ ಒಂದು ಕೂಟ ದಾಖಲೆ ಉತ್ತಮ ಪಡಿಸಿಕೊಂಡರು. 20 ಕಿ.ಮೀ ನಡಿಗೆ ಓಟವನ್ನು ಸಚಿನ್ ಸಿಂಗ್ 1.23.32 ಸೆಕೆಂಡ್‌ನಲ್ಲಿ ಕ್ರಮಿಸಿ ನೂತನ ಕೂಟ ದಾಖಲೆ ನಿರ್ಮಿಸಿದರೆ, ಮಹಿಳೆಯರ ವಿಭಾಗದ 3000ಮೀ ಸ್ಟೀಪಲ್‌ಚೇಸ್‌ನಲ್ಲಿ ಮಂಜು ಯಾದವ್ 10.00.14 ಸೆ.ನಲ್ಲಿ ಗುರಿ ಮುಟ್ಟಿ ನೂತನ ದಾಖಲೆ ನಿರ್ಮಿಸಿದರು. ಆಳ್ವಾಸ್‌ನ ಸಾಕ್ಷಿ ಶರ್ಮಾ ಜಾವಲಿನ್ ಥ್ರೋ ವಿಭಾಗದಲ್ಲಿ ಪೂನಂರಾಣಿಯ ಹೆಸರಿನಲ್ಲಿದ್ದ(53.26ಮೀ) ಕೂಟ ದಾಖಲೆಯನ್ನು 53.41 ಮೀ. ದೂರ ಎಸೆಯುವ ಮೂಲಕ ಕೂಟ ದಾಖಲೆ ಸಾಧನೆ ಉತ್ತಮಪಡಿಸಿಕೊಂಡರು. 2024ರವರೆಗೆ ನಡೆದ ಎಲ್ಲ ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಮಂಗಳೂರು ವಿ.ವಿ. ನಿರ್ಮಿಸಿರುವ 6 ನೂತನಕೂಟ ದಾಖಲೆ ಆಳ್ವಾಸ್ ವಿದ್ಯಾರ್ಥಿಗಳ ಕೊಡುಗೆಯಾಗಿದೆ.