ಜಿಲ್ಲೆ

ಕಠಿಣ ಪರಿಶ್ರಮದಿಂದ ಸಾಧನೆ ಸಾಧ್ಯ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಂಗೀತ ಕಲಿಯುವ ವಿದ್ಯಾರ್ಥಿಗಳಲ್ಲಿ ಸ್ವಚ್ಛ ಮನಸ್ಸು, ಶ್ರದ್ಧೆ, ಪ್ರಾಮಾಣಿಕ, ನಿರ್ಮಲ ಮನಸ್ಸಿನಿಂದ ಸಮರ್ಪಣಾ ಭಾವ ಇದ್ದಾಗ ಮಾತ್ರ ಶ್ರೇಷ್ಠ ಕಲಾವಿದರಾಗಲು ಸಾಧ್ಯ ಎಂದು ಕವಿವಿ ಸಂಗೀತ ಹಾಗೂ ಲಲಿತಕಲಾ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ತರ್ಲಗಟ್ಟಿ ಹೇಳಿದರು.
ನಗರದ ಬೇಂದ್ರ ಭವನದಲ್ಲಿ ತಬಲಾ ವಾದಕ ಪಂ. ಶಂಕ್ರಪ್ಪ ಹಾಗೂ ಭೀಮಾಬಾಯಿ ಹೂಗಾರ ಸಂಗೀತ ಸಭಾ ವತಿಯಿಂದ ಶನಿವಾರ ಏರ್ಪಡಿಸಿದ್ದ ಗುರುವಂದನಾ ಹಾಗೂ ಸಂಗೀತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂಗೀತವು ನಿರಂತರ, ಕಠಿಣ ಪರಿಶ್ರಮ ಸಾಧನೆಯಿಂದ ಸಿದ್ಧಿಸಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಮಧುಸೂದನ ಕುಲಕರ್ಣಿ ಮಾತನಾಡಿ, ಸಂಗೀತ ಮತ್ತು ನಾಡಿ ಪರಸ್ಪರ ಅನ್ಯೋನ್ಯವಾಗಿರುವಂತಹವು. ಸಂಗೀತದಿಂದ ಸಾತ್ವಿಕತೆ ವೃದ್ಧಿಯಾಗುತ್ತದೆ. ಸಂಗೀತವನ್ನು ಕೇಳುವುದರಿಂದ ನಮ್ಮ ಮನಸ್ಸು ಸದಾ ಚೈತನ್ಯಶಿಲವಾಗಿರುತ್ತದೆ ಎಂದರು.
ಪಂ.ಸಾತಲಿಂಗಪ್ಪ ದೇಸಾಯಿ ಕಲ್ಲೂರ ಹಾಗೂ ಹರ್ಷಾ ದೇಸಾಯಿ ಕಲ್ಲೂರ ದಂಪತಿಗೆ ಶಿಷ್ಯವರ್ಗದವರಿಂದ ಗುರುವಂದನೆ ಸಲ್ಲಿಸಲಾಯಿತು. ತಬಲಾ ಕಲಾವಿದ ಪಂ.ಸಾತಲಿಂಗಪ್ಪ ದೇಸಾಯಿ ಕಲ್ಲೂರ, ಶ್ರೀ ಕುಮಾರೇಶ್ವರ ಕಲ್ಚರಲ್​ ಸೊಸೈಟಿ ಸಂಯೋಜಕ ಪ್ರಕಾಶ ಬಾಳಿಕಾಯಿ, ಉಮೇಶ ಮುನವಳ್ಳಿ, ಇತರರು ಇದ್ದರು.
ಭಾಗ್ಯಶ್ರೀ ಹೂಗಾರ ಸ್ವಾಗತಿಸಿದರು. ಮಂಜುಳಾ ಮುನವಳ್ಳಿ ನಿರೂಪಿಸಿದರು. ಶ್ರದ್ಧಾ ಪೈ ವಂದಿಸಿದರು. ನಂತರ ಸಂಗೀತ ಕಾರ್ಯಕ್ರಮ ಜರುಗಿತು.