ಬಳ್ಳಾರಿ ನಗರದ ಜ್ಞಾನಾಮೃತ ಪದವಿಪೂರ್ವ ಕಾಲೇಜು ಆವರಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಬಾಲಕ-ಬಾಲಕಿಯರ ವಾಲಿಬಾಲ್ ಪಂದ್ಯಾವಳಿಗೆ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಪ ನಿರ್ದೇಶಕ ಗಿರೀಶ್ ಎಂ.ಟಿ ಚಾಲನೆ ನೀಡಿದರು. ಡಾ.ಮಲ್ಲಿಕಾರ್ಜುನ ಗೌಡ, ದಿನೇಶ್ ಎಂ. ಕೊಡವೂರು, ಮಹೇಶ್ ಇನ್ನಿತರರಿದ್ದರು.
ಬಳ್ಳಾರಿ : ವಿದ್ಯಾರ್ಥಿಗಳು ಕ್ರೀಡೆಯೊಂದಿಗೆ ಮಾನಸಿಕ ಏಕಾಗ್ರತೆಯನ್ನು ಸಾಧಿಸಿ ಓದಿನಲ್ಲಿ ಉತ್ತಮ ಅಂಕಗಳನ್ನು ಪಡೆಯಬೇಕು ಎಂದು ಮರ್ಚೇಡ್ ಸಂಸ್ಥೆಯ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಗೌಡ ಅಭಿಪ್ರಾಯಪಟ್ಟರು.
ನಗರದ ಜ್ಞಾನಾಮೃತ ಪದವಿಪೂರ್ವ ಕಾಲೇಜು ಆವರಣದಲ್ಲಿ ಈಚೆಗೆ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಬಾಲಕ-ಬಾಲಕಿಯರ ವಾಲಿಬಾಲ್ ಪಂದ್ಯಾವಳಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಪ ನಿರ್ದೇಶಕ ಗಿರೀಶ್ ಎಂ.ಟಿ ಮಾತನಾಡಿ, ತಾಲೂಕು ಮಟ್ಟದ ಪಂದ್ಯಾವಳಿಯನ್ನು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಬಳಸುವಂತಹ ಸುಸಜ್ಜಿತ ಕ್ರೀಡಾಂಗಣ ಹಾಗೂ ಮೂಲ ಸೌಕರ್ಯ ಅವಶ್ಯಕತೆಗಳೊಂದಿಗೆ ಸಜ್ಜುಗೊಳಿಸಿ ಕ್ರೀಡಾಪಟುಗಳಿಗೆ ಒದಗಿಸುವಲ್ಲಿ ಮರ್ಚೇಡ್ ಟ್ರಸ್ಟ್ ನ ಶ್ರಮವನ್ನು ಶ್ಲಾಘನೀಯ ಎಂದರು.
ಇದೇ ವೇಳೆ ಇತ್ತೀಚೆಗೆ ವೆಂಕಟಗಿರಿಯಲ್ಲಿ ನಡೆದ ಆಂಧ್ರ ಕ್ರಿಕೆಟ್ ಅಸೋಸಿಯೇಷನ್ ನಡೆಸಿದ ಮಹಿಳೆಯರ ಅಂಡರ್ -19 ಕ್ರಿಕೆಟ್ ಕ್ರೀಡಾಕೂಟದಲ್ಲಿ ಅನಂತಪುರ ಜಿಲ್ಲೆಯನ್ನು ಪ್ರತಿನಿಧಿಸಿದ ಜ್ಞಾನಾಮೃತ ಸಂಸ್ಥೆಯ ವಿದ್ಯಾರ್ಥಿನಿ ರಿಷಿಕಾ ರೆಡ್ಡಿ ಅವರನ್ನು ಸನ್ಮಾನಿಸಲಾಯಿತು.
ಮರ್ಚೇಡ್ ಸಂಸ್ಥೆಯ ಕಾರ್ಯದರ್ಶಿ ಡಾ.ಮಲ್ಲಿಕಾರ್ಜುನ ಗೌಡ ಅವರು, ವಾಲಿಬಾಲ್ ಪಂದ್ಯಾವಳಿ ಯಶಸ್ಸಿಗೆ ಶುಭ ಹಾರೈಸಿದರು.
- ಒಟ್ಟು 31 ತಂಡಗಳು ಭಾಗಿ
ವಾಲಿಬಾಲ್ ಪಂದ್ಯಾವಳಿಯಲ್ಲಿ ಬಾಲಕರ ವಿಭಾಗದಲ್ಲಿ 22 ತಂಡಗಳು ಬಾಲಕಿಯರ ವಿಭಾಗದಿಂದ 9 ತಂಡಗಳು ಭಾಗವಹಿಸಿದ್ದವು. ಬಾಲಕರ ವಿಭಾಗದಲ್ಲಿ ಸರ್ಕಾರಿ ಪಿ.ಯು ಕಾಲೇಜು ಪ್ರಥಮ, ಜ್ಞಾನಾಮೃತ ಕಾಲೇಜು ದ್ವಿತೀಯ ಹಾಗೂ ಮತ್ತು ಬಾಲಕಿಯರ ವಿಭಾಗದಲ್ಲಿ ಬೆಸ್ಟ್ ಪಿಯು ಕಾಲೇಜು ಪ್ರಥಮ ಹಾಗೂ ಸತ್ಯಂ ಪಿಯು ಕಾಲೇಜು ದ್ವಿತೀಯ ಸ್ಥಾನ ಗಳಿಸಿದರು. ಮರ್ಚೇಡ್ ಸಂಸ್ಥೆಯ ವತಿಯಿಂದ ಸುಮಾರು 500 ಕ್ರೀಡಾಪಟುಗಳಿಗೆ ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಸರ್ಕಾರಿ (ಮಾ.ಪು.) ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಕುಮಾರಸ್ವಾಮಿ ಹಾಗೂ ತೀರ್ಪುಗಾರರಾಗಿ ಆಗಮಿಸಿದ್ದ ಸರ್ಕಾರಿ ಪ್ರೌಢ ಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಸೂರ್ಯ ಪ್ರಕಾಶ ಅವರನ್ನು ಸನ್ಮಾನಿಸಲಾಯಿತು.
ಕಾರ್ಕಳದ ಜ್ಞಾನಸುಧಾ ಶಿಕ್ಷಣ ಸಂಸ್ಥೆ ಸಿಇಒ ದಿನೇಶ್ ಎಂ. ಕೊಡವೂರು, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಮಹೇಶ್, ಕ್ರೀಡಾ ಸಂಯೋಜಕ ಸಂತೋಷ್, ಸಂಸ್ಥೆಯ ಆಡಳಿತಾಧಿಕಾರಿ ವಿನಯ್, ಕನ್ನಡ ವಿಭಾಗದ ಉಪನ್ಯಾಸಕ ಲೋಕೇಶ್ ಹಾಗೂ ವಿವಿಧ ಕಾಲೇಜುಗಳ ದೈಹಿಕ ಶಿಕ್ಷಣ ಶಿಕ್ಷಕರು ಉಪಸ್ಥಿತರಿದ್ದರು.