ಜಿಲ್ಲೆ

ಶಿಸ್ತಿನಿಂದ ಕಲಿತರೆ ಸಾಧನೆ ಸಾಧ್ಯ

ಸೋಮವಾರಪೇಟೆ : ಶ್ರದ್ಧೆ, ಸಮಯಪಾಲನೆ ಮತ್ತು ಶಿಸ್ತಿನಿಂದ ಕಲಿತರೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು ಎಂದು ಸೋಮವಾರಪೇಟೆ ಸಂತಜೋಸೆಫರ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಧರ್ಮಗುರು ಅವಿನಾಶ್ ಅಭಿಪ್ರಾಯಪಟ್ಟರು.

ಸಂತ ಜೋಸೆಫರ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ನಡೆದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪೋಷಕರು ತಮ್ಮ ಮಕ್ಕಳ ಮೇಲೆ ದೊಡ್ಡ ಕನಸು ಕಟ್ಟಿಕೊಂಡಿರುತ್ತಾರೆ. ಓದಿನ ಮೂಲಕ ಅವರ ಕನಸು ನನಸು ಮಾಡುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಜವಾಬ್ದಾರಿ. ವಿದ್ಯೆ ಮೂಲಕವೇ ತಮ್ಮ ಭವಿಷ್ಯವನ್ನು ನಿರ್ಧರಿಸಿಕೊಳ್ಳಬೇಕಾದ ಅನಿವಾರ್ಯತೆ ವಿದ್ಯಾರ್ಥಿಗಳಿಗಿದೆ ಎಂದು ಹೇಳಿದರು.

ಪಟ್ಟಣ ಪಂಚಾಯಿತಿ ಸದಸ್ಯೆ ಶೀಲಾ ಡಿಸೋಜ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನಕ್ಕೆ ಮಾತ್ರ ಬೆಲೆ ಇದೆ. ಶಿಸ್ತುಬದ್ಧ್ದವಾಗಿ ನಿರಂತರ ಕಲಿಕೆಯ ಮೂಲಕ ಜ್ಞಾನ ಸಂಪಾದಿಸಿಕೊಳ್ಳಬಹುದು. ಕಲಿತ ವಿದ್ಯೆಯನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ ಎಂದು ಹೇಳಿದರು.

2023-24ರ ಸಾಲಿನ ದ್ವಿತೀಯ ಪಿಯುಸಿಯಲ್ಲಿ ಕಾಲೇಜಿನಲ್ಲಿ ಅತಿಹೆಚ್ಚು ಅಂಕ ಪಡೆದ ಟಿ.ವಿ.ಕಾರುಣ್ಯಾ ಮತ್ತು ಮೆಲಿಸಾ ಡಿಸೋಜ, ಅವರ ಪಾಲಕರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಪ್ರಿನ್ಸ್ ಶೂ ಮಾರ್ಟ್‌ನ ಪ್ರಿನ್ಸಿ ಜೋಸೆಫ್, ಪ್ರಾಂಶುಪಾಲರಾದ ಎ.ಥಾಮಸ್, ಮುಖ್ಯ ಶಿಕ್ಷಕ ಹ್ಯಾರಿ ಮೋರಸ್, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಸ್ಥೆ ಕಾವ್ಯಾ ಇದ್ದರು. ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮ ನಡೆಯಿತು.