ಕೊಳ್ಳೇಗಾಲ : ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಸ್ಪರ್ಧಾ ಮನೋಭಾವ ಬೆಳೆಸಿಕೊಂಡರೆ ಸಾಧನೆ ಸಾಧ್ಯ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ಶ್ರೀ ಮಹದೇಶ್ವರ ಕಾಲೇಜು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಮಂಗಳವಾರ ಪಾಲ್ಗೊಂಡು ಅವರು ಮಾತನಾಡಿದರು.
ವಿದ್ಯಾರ್ಥಿ ದೆಸೆಯಲ್ಲಿ ಖೋ-ಖೋ, ಗುಂಡು ಎಸೆತ, ಡಿಸ್ಕಸ್ ಥ್ರೋ ಆಗಿದ್ದೆ. ನನಗೆ ಕ್ರೀಡೆ ಎಂದರೆ ಬಹಳ ಅಚ್ಚು ಮೆಚ್ಚು. ಹಾಗಾಗಿ ಸಣ್ಣ ಸಣ್ಣ ಕ್ರೀಡಾಕೂಟ ಆಯೋಜಿಸಿದರೂ ಆ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ ಎಂದರು.
ಯಳಂದೂರಿನ ಕ್ರೀಡಾಪಟುಗಳು ನಮಗೆ ಕ್ರೀಡಾಂಗಣವಿಲ್ಲ. ಕ್ರೀಡಾ ಚಟುವಟಿಗಳು ನಡೆಯಲು ಕ್ರೀಡಾಂಗಣ ಮಾಡಿಸಿಕೊಡಿ ಎಂದು ಮನವಿ ಮಾಡಿದ್ದಾರೆ. ಆದರೆ ಸೂಕ್ತ ಸ್ಥಳ ಸಿಗುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಕ್ರಮವಹಿಸಲಾಗುತ್ತದೆ ಎಂದರು.
ಬಳಿಕ ಓಟ ಸ್ಪರ್ದೆ, ಕಬ್ಬಡಿ, ವಾಲಿಬಾಲ್, ಖೋ-ಖೋ ಥ್ರೋ ಬಾಲ್ ಕ್ರೀಡೆಯನ್ನು ನಡೆಸಲಾಯಿತು.
ಕ್ರೀಡಾಪಟುಗಳು ಉತ್ಸಾಹದಿಂದ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು. ಮಧ್ಯಾಹ್ನ 3 ಗಂಟೆಯಲ್ಲಿ ಬಿದ್ದ ಮಳೆ ಯಿಂದ ಮಹದೇಶ್ವರ ಕಾಲೇಜು ಮೈದಾನದಲ್ಲಿ ನೀರು ತುಂಬಿಕೊಂಡು ಕ್ರೀಡಾ ಚಟುವಟಿಕೆಗಳಿಗೆ ತೊಂದರೆ ಉಂಟಾಯಿತು. ನಂತರ ಮುಂದುವರೆದ ಥ್ರೋ ಬಾಲ್, ಕಬ್ಬಡಿ, ವಾಲಿಬಾಲ್ ಕ್ರೀಡೆಯನ್ನು ಎಂಜಿಎಸ್‌ವಿ ಕಾಲೇಜು ಮೈದಾನದಲ್ಲಿ ನಡೆಸಲಾಯಿತು.
ಕ್ರೀಡಾಕೂಟದಲ್ಲಿ ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಜಿಲ್ಲಾ ಗ್ಯಾರಂಟಿ ಅನುಷ್ಠ್ಠಾನ ಸಮಿತಿ ಅಧ್ಯಕ್ಷ ಚಂದ್ರು, ತಾಲೂಕು ಅಧ್ಯಕ್ಷ ರಾಜೇಂದ್ರ, ತಾ.ಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಬಿಇಒ ಮಂಜುಳಾ, ಮಹದೇಶ್ವರ ಕಾಲೇಜು ಪ್ರಾಂಶುಪಾಲೆ ಜಯಲಕ್ಷ್ಮೀ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸುರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್ ಮತ್ತಿತರಿದ್ದರು.