ಜಿಲ್ಲೆ

ನಕಾರಾತ್ಮಕ ಭಾವನೆಯಿಂದ ಸಾಧನೆ ಅಸಾಧ್ಯ

ವೀರೇಶ ಸೌದ್ರಿ

ಶಿರಸಿ: ಪ್ರವಚನಗಳಿಂದ ಚಿತ್ತ ಶುದ್ಧಿ, ಜ್ಞಾನ ವೃದ್ಧಿಯಾಗುತ್ತದೆ ಎಂದು ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಹೇಳಿದರು.

ಮಹಾಸಂಸ್ಥಾನದಲ್ಲಿ ಶಾಂಕರ ಸರಸ್ವತೀ ಕಾರ್ಯಕ್ರಮದ ಸಮಾರೋಪದಲ್ಲಿ ಸೋಮವಾರ ಆಶೀರ್ವಚನ ನೀಡಿದರು.

ಸ್ವಾಧ್ಯಾಯ ಮತ್ತು ಪ್ರವಚನಗಳನ್ನು ಯಾವಾಗಲೂ ಬಿಡಬಾರದು. ಇದರಿಂದ ಓದಿದ ವಿದ್ಯೆ ನೆನಪಿರಲು ಸಾಧ್ಯವಾಗುತ್ತದೆ ಮತ್ತು ವಿದ್ಯೆಯ ಪರಂಪರೆಯು ಮುಂದುವರಿಯುತ್ತದೆ. ಓದಿದ ವಿಷಯಗಳನ್ನು ಅವಲೋಕನ, ಪಾಠ, ಪ್ರವಚನ ಮಾಡುವುದನ್ನು ಮುಂದುವರಿಸಬೇಕು. ವಿದ್ಯೆ ಯಾವಾಗಲೂ ಖರ್ಚು ಮಾಡಿದ ಹಾಗೆ ಬೆಳೆಯುತ್ತ ಹೋಗುತ್ತದೆ ಎಂದರು.

ನಕಾರಾತ್ಮಕ ಭಾವನೆಯಿಂದ ಯಾವ ಸಾಧನೆಯೂ ಆಗುವುದಿಲ್ಲ. ನಕಾರಾತ್ಮಕ ಭಾವನೆಯನ್ನು ಯಾವಾಗಲೂ ಯಾರೂ ಮಾಡಿಕೊಳ್ಳಬಾರದು. ಏನು ಉಂಟು ಎಂಬುದನ್ನು ಚಿಂತನೆ ಮಾಡಬೇಕು. ನಕಾರಾತ್ಮಕ ಭಾವನೆಯನ್ನು ಕೈ ಬಿಟ್ಟು ಇನ್ನಷ್ಟು ಅಧ್ಯಯನ, ಅಧ್ಯಾಪನದಲ್ಲಿ ತೊಡಗಬೇಕು. ಆಗ ಮತ್ತಷ್ಟು ಗಟ್ಟಿತನ ಬರುತ್ತದೆ. ಆಗಾಗ ನಡೆಯುವ ಚಿಂತನಾ ಗೋಷ್ಠಿಯಲ್ಲಿ ಪಾಲ್ಗೊಂಡು ಅಲ್ಲಿಯ ಪ್ರಯೋಜನ ಪಡೆದುಕೊಳ್ಳುವಲ್ಲಿ ಗಮನಹರಿಸಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಶಿರಳಗಿ ಶ್ರೀಬ್ರಹ್ಮಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿ, ಬದುಕಿನ ಉದ್ದೇಶವನ್ನು ವೇದವು ಅತ್ಯಂತ ಸ್ಪಷ್ಟವಾಗಿ ಹೇಳಿದೆ. ಭಗವತ್ಪ್ರಾಪ್ತಿಯೇ ಮೂಲ ಉದ್ದೇಶ. ಅದರಿಂದಲೇ ಶಾಂತಿ, ಸಮಾಧಾನ. ಸಂಸ್ಕೃತ ಶಾಸ್ತ್ರ ಅಧ್ಯಯನ ಮಾಡಿದವರು ಸ್ವಾಧ್ಯಾಯ ಮತ್ತು ಪ್ರವಚನಗಳನ್ನು ಬಿಡಬೇಡಿ ಎಂದರು.

ಸ್ವಾಧ್ಯಾಯ ಪ್ರಚನಗಳಿಂದ ಚಿತ್ತ ಶುದ್ಧಿಯಾಗುತ್ತದೆ, ಜ್ಞಾನ ವೃದ್ಧಿಯಾಗುತ್ತದೆ. ಜೀವನದ ಧ್ಯೇಯ ಜ್ವಾಜ್ವಲ್ಯಮಾನವಾಗಿ ಹೊಳೆಯುತ್ತದೆ. ಅದಕ್ಕಾಗಿ ಇದನ್ನು ನಾವು ಯಾವಾಗಲೂ ಬಿಡಬಾರದು. ಇಂದಿನ ಸಮಾಜದಲ್ಲಿ ಸಾಮಾನ್ಯ ಜನರಿಗೆ ಧರ್ಮ ಮಾರ್ಗವನ್ನು, ಆಚರಣೆಗಳನ್ನು ತಿಳಿಸುವ ಅವಶ್ಯಕತೆ ಇದೆ ಎಂದರು.

ಸ್ವರ್ಣವಲ್ಲೀ ಕಿರಿಯ ಸ್ವಾಮೀಜಿ ಶ್ರೀ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮೀಜಿ ಮಾತನಾಡಿ, ವೇದಗಳೆಲ್ಲ ಪ್ರಾಚೀನ ಋಷಿಗಳು ತಪಸ್ಸು ಮಾಡುವಾಗ ಈಶ್ವರಾನುಗ್ರಹದಿಂದ ಗೋಚರಿಸಿದಂತಹವುಗಳು. ಹಾಗಾಗಿ ಅವುಗಳು ಮಾನವ ನಿರ್ಮಿತವಾದ ಕೃತಿಗಳಲ್ಲ, ಅಲ್ಲಿರುವುದೆಲ್ಲ ಸತ್ಯವೇ. ಅವುಗಳೇ ಸಕಲ ಮಾನವ ಜನಾಂಗದ ಶ್ರೇಯಸ್ಸಿಗೆ ಕಾರಣ ಎಂದು ನಂಬಿದ್ದೇವೆ. ಆದ್ದರಿಂದಲೇ ನಮ್ಮ ಜನರು ಬಹಳ ವಿಸ್ತಾರವಾಗಿರುವ ವೇದ ರಾಶಿಯನ್ನು ಗುರು-ಶಿಷ್ಯ ಪರಂಪರೆಯಿಂದ ಕಲಿತು ಅದನ್ನ ರಕ್ಷಿಸಿಕೊಂಡು ಬಂದಿದ್ದಾರೆ. ಧರ್ಮಶಾಸ್ತ್ರ ಮುಂತಾದ ಪ್ರಾಚೀನ ಗ್ರಂಥಗಳೆಲ್ಲವೂ ಈ ವೇದಮೂಲದಿಂದಲೇ ಬಂದಿವೆ. ಭಾರತೀಯ ಸಂಸ್ಕೃತಿಯ ಆಚಾರ, ವ್ಯವಹಾರ ಪದ್ಧತಿಗಳೆಲ್ಲ ಈ ವೇದಮೂಲದಿಂದ ಪ್ರಾರಂಭವಾದ್ದರಿಂದ ಇದನ್ನೇ ವೈದಿಕ ಸಂಸ್ಕೃತಿ ಎಂದು ಕರೆದರು ಎಂದರು.

ವಿದ್ವಾನ್ ಸೂರ್ಯನಾರಾಯಣ ಭಟ್ಟ ಹಿತ್ಲಳ್ಳಿ ಅವರು ಪೂರ್ವ ಮೀಮಾಂಸಾದ ವಿಚಾರಗಳನ್ನು ನಿರೂಪಿಸಿದರು. ಪ್ರಾಚಾರ್ಯ ಡಾ. ಕೃಷ್ಣ ಜೋಶಿ ಮೂಲೆಮನೆ ಇದ್ದರು. ಮಹಾಬಲೇಶ್ವರ ಭಟ್ಟ ಕಿರಕುಂಭತ್ತಿ ನಿರ್ವಹಿಸಿದರು.

ಶ್ರೀ ಮಠದಲ್ಲಿ ಒಂದು ಹಂತದ ವಿದ್ಯಾಭ್ಯಾಸವನ್ನು ಮುಗಿಸಿದ ವಿದ್ಯಾರ್ಥಿಗಳಿಗೆ ಸ್ವರ್ಣಶಂಕರ ಪ್ರಶಸ್ತಿ ಪುರಸ್ಕಾರ ಮಾಡಲಾಯಿತು.