ಜಿಲ್ಲೆ

ಆತ್ಮವಿಶ್ವಾಸ, ಪ್ರಾಮಾಣಿಕ ಪ್ರಯತ್ನದಿಂದ ಸಾಧನೆ : ತಬಿಶ್ ಹಸನ್ ಅಭಿಪ್ರಾಯ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಜೀವನದಲ್ಲಿ ಯಶಸ್ಸು ಕೇವಲ ಪ್ರತಿಭೆಯಿಂದ ನಿರ್ಧಾರವಾಗುವುದಿಲ್ಲ. ಶ್ರೇಷ್ಠ ಸಾಧನೆಯೆಡೆಗಿನ ತುಡಿತ, ಆತ್ಮವಿಶ್ವಾಸ, ನಿರಂತರ ಪರಿಶ್ರಮ ಹಾಗೂ ಗುರಿಯತ್ತ ಸರಿಯಾದ ಮಾರ್ಗದಲ್ಲಿ ಸಾಗುವ ಪ್ರಾಮಾಣಿಕ ಪ್ರಯತ್ನ ಸಾಧನೆಯನ್ನು ಸಹಕಾರಗೊಳಿಸುತ್ತದೆ ಎಂದು 2021ರ ಅಖಿಲ ಭಾರತ ಸಿಎ ಅಂತಿಮ ಪರೀಕ್ಷೆಯಲ್ಲಿ 10ನೇ ರ‌್ಯಾಂಕ್ ಪಡೆದ ಆಳ್ವಾಸ್‌ನ ಹಿರಿಯ ವಿದ್ಯಾರ್ಥಿ ಸಿಎ ತಬಿಶ್ ಹಸನ್ ಅಭಿಪ್ರಾಯಪಟ್ಟರು.

ಆಳ್ವಾಸ್ ಪಿಯು ಕಾಲೇಜಿನ ವಾಣಿಜ್ಯ ಸಂಘದ ಆಶ್ರಯದಲ್ಲಿ ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಪ್ರಸಕ್ತ ವರ್ಷದ ದ್ವಿತೀಯ ಪಿಯುಸಿಯಲ್ಲಿ ಟಾಪ್ 10ರ ಒಳಗೆ ರ‌್ಯಾಂಕ್ ಪಡೆದ ಹಾಗೂ ಸಿಎ ಫೈನಲ್ ಪರೀಕ್ಷೆಯನ್ನು 2025ರಲ್ಲಿ ಉತ್ತೀರ್ಣರಾದ ಸಾಧಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಅಧ್ಯಕ್ಷತೆ ವಹಿಸಿದರು. ಪ್ರಸಕ್ತ ವರ್ಷದಲ್ಲಿ ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾದ 26 ವಿದ್ಯಾರ್ಥಿಗಳು ಹಾಗೂ 2025ನೇ ಸಾಲಿನಲ್ಲಿ ವಾಣಿಜ್ಯ ಮತ್ತು ಕಲಾ 20 ವಿಭಾಗದಲ್ಲಿ ಟಾಪ್ 10ರ ಒಳಗೆ ರ‌್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಪ್ರಾಂಶುಪಾಲ ಪ್ರೊ.ಮೊಹಮ್ಮದ್ ಸದಾಕತ್, ಉಪಪ್ರಾಂಶುಪಾಲೆ ಝಾನ್ಸಿ ಪಿ.ಎನ್., ಕಲಾ ನಿಖಾಯದ ಡೀನ್ ವೇಣುಗೋಪಾಲ ಶೆಟ್ಟಿ, ವಾಣಿಜ್ಯ ನಿಖಾಯದ ಡೀನ್ ಪ್ರಶಾಂತ ಎಂ.ಡಿ. ಇದ್ದರು. ಉಪನ್ಯಾಸಕ ರಾಜೇಶ್ ಡಿಸೋಜ ನಿರೂಪಿಸಿದರು. ಉಪನ್ಯಾಸಕಿ ಶಾಲೆಟ್ ಮುಖ್ಯ ಅತಿಥಿಯನ್ನು ಪರಿಚಯಿಸಿದರು.