ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ನಗರದ ಕನಕದಾಸ ಶಿಕ್ಷಣ ಸಮಿತಿಯ ವಿಜಯನಗರ ಪದವಿ ಪೂರ್ವ ಕಾಲೇಜಿನ 2024-2025ನೇ ಸಾಲಿನ ಪಠ್ಯ, ಪಠ್ಯೇತರ ಹಾಗೂ ಎನ್ಎಸ್ಎಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ನಡೆಯಿತು.
ಸಮಿತಿಯ ಉಪಾಧ್ಯಕ್ಷ ಡಾ. ಶಾಂತಣ್ಣ ಕಡಿವಾಳ ಮಾತನಾಡಿ, ವಿದ್ಯಾರ್ಥಿಗಳು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಬೇಕಾದರೆ ಹೆಚ್ಚು ಪರಿಶ್ರಮ ಪಡಬೇಕು ಎಂದು ಕರೆ ನೀಡಿದರು.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಿಂಡಿಕೇಟ ಸದಸ್ಯ ಡಾ. ಎಚ್.ವಿ. ಬೆಳಗಲಿ ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳಬೇಕು ಎಂದರು.
ಕರ್ನಾಟಕ ವಿಶ್ವವಿದ್ಯಾಲಯದಿಂದ ಭೂಗೋಳಶಾಸ್ತ್ರ ವಿಷಯದಲ್ಲಿ ಡಾಕ್ಟರೇಟ್ ಪದವಿ ಪಡೆದ ಡಾ. ಬಿ. ಜಿ. ಮಡ್ಲಿ ಹಾಗೂ ವಿಜಯನಗರ ಶಿಕ್ಷಣ ಮಹಾವಿದ್ಯಾಲಯದಿಂದ ಸೇವೆಯಿಂದ ನಿವೃತ್ತರಾಗಲಿರುವ ಮಹಾದೇವಪ್ಪ ಅತ್ತಿಕೋಳ ಅವರನ್ನು ಸನ್ಮಾನಿಸಲಾಯಿತು.
ಎಂಎಸ್ಐಎಲ್ ನಿರ್ದೇಶಕ ತೋಟಪ್ಪ ನಿಡಗುಂದಿ, ಯಶೋದಾ ತಾಂಬೆ, ವಿದ್ಯಾರ್ಥಿ ಪ್ರತಿನಿಧಿ ವಿನಯ ರಿತ್ತಿ, ಪ್ರತಿನಿಧಿ ಪೂರ್ಣಿಮಾ ಮೋಟೆ ಉಪಸ್ಥಿತರಿದ್ದರು. ಪ್ರಾಚಾರ್ಯ ಸಂದೀಪ ಬೂದಿಹಾಳ ಸ್ವಾಗತಿಸಿದರು. ಡಾ. ಅಶೋಕ ಗಡಾದ ನಿರೂಪಿಸಿದರು.