ತರೀಕೆರೆ: ಕಲಿಕಾ ಹಂತದಲ್ಲೇ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತರಬೇಕು ಎಂದು ಪುರಸಭೆ ಸದಸ್ಯ ಟಿ.ಜಿ.ಲೋಕೇಶ್ ಹೇಳಿದರು.
ಪಟ್ಟಣದ ಬಾಲಕರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಕಸಬಾ ಎ ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಸರ್ಕಾರ ಕ್ರೀಡಾಕೂಟ ನಡೆಸಲು ಸಾಂಕೇತಿವಾಗಿ ಅನುದಾನ ನೀಡುತ್ತಿದ್ದು, ವಲಯ ಹಾಗೂ ಕ್ಲಸ್ಟರ್ ಮಟ್ಟದ ಕ್ರೀಡಾಕೂಟಗಳಿಗೆ ಅಗತ್ಯ ಅನುದಾನ ಒದಗಿಸಬೇಕು ಎಂದರು.
ಸಿಎಸ್‌ಐ ಇಂಗ್ಲೀಷ್ ನರ್ಸರಿ ಮತ್ತು ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಶಾಂತಿ ಜೆ.ಸೆಲ್ವಿನ್ ಮಾತನಾಡಿ, ಕಸಬಾ ಎ ವಲಯ ಮಟ್ಟದ ಕ್ರೀಡಾಕೂಟದ ವ್ಯಾಪ್ತಿಗೆ ಸುಮಾರು 30 ಶಾಲೆಗಳು ಒಳಪಡಲಿದ್ದು, ನೂರಾರು ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ತೀರ್ಪುಗಾರರು ನ್ಯಾಯ ಸಮ್ಮತ ತೀರ್ಪು ನೀಡಿ ಅರ್ಹ ಕ್ರೀಡಾಪಟುಗಳು ಮುಂದಿನ ಹಂತಕ್ಕೆ ತೆರಳಲು ಅವಕಾಶ ಮಾಡಿಕೊಡಬೇಕು ಎಂದರು.
ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್, ದೈಹಿಕ ಶಿಕ್ಷಣ ಪರಿವೀಕ್ಷಕ ವೇದಮೂರ್ತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸಿ.ವಿ.ರವಿ, ಉಪಾಧ್ಯಕ್ಷೆ ಮೀನಾಕ್ಷಮ್ಮ, ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ನಿರ್ದೇಶಕ ಎಂ.ಬಿ.ರಾಮಚಂಂದ್ರಪ್ಪ ಮತ್ತಿತರರಿದ್ದರು.