ಹುಬ್ಬಳ್ಳಿ: ಅಳಿಸಿ ಹೋಗುವ ಸ್ಥಿತಿಯಲ್ಲಿದ್ದ ದಿಗಂಬರ ಮುನಿ ಪರಂಪರೆಗೆ ಇಪ್ಪತ್ತನೆಯ ಶತಮಾನದಲ್ಲಿ ಪುನರ್ನೆಲೆ ಕೊಟ್ಟವರು ಆಚಾರ್ಯ ಶಾಂತಿಸಾಗರರು. ಆ ಶತಮಾನದ ಪ್ರಥಮ ದಿಗಂಬರ ಆಚಾರ್ಯರಾಗಿ ದೇಶದುದ್ದಕ್ಕೂ ವಿಹಾರ ಮಾಡಿ ಮುನಿ ಪರಂಪರೆಯನ್ನು ಪೋಷಿಸಿ ಜೈನ ಸಮಾಜದ ಬುನಾದಿಯನ್ನು ಭದ್ರಪಡಿಸಿದ ಅವರ ಉಪಕಾರವನ್ನು ಸಮಾಜವು ಸದಾ ಸ್ಮರಿಸುತ್ತದೆ ಎಂದು ಜೈನ ಸಮಾಜದ ಪೂರ್ವ ಅಧ್ಯಕ್ಷ ಶಾಂತಿನಾಥ ಹೋತಪೇಟಿ ಹೇಳಿದರು.
ಆಚಾರ್ಯ ಶ್ರೀಗಳ 69ನೇ ಪುಣ್ಯತಿಥಿ ನಿಮಿತ್ತ ನಗರದ ದಿಗಂಬರ ಜೈನ ಸಮಾಜವು ಶಾಂತಿನಾಥ ಭವನದಲ್ಲಿ ಏರ್ಪಡಿಸಿದ್ದ ಆಚಾರ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೆಳಗ್ಗೆ ಶಾಂತಿನಾಥ ಬಸದಿಯಲ್ಲಿ ಶಾಂತಿನಾಥ ತೀರ್ಥಂಕರರ ವಿಶೇಷ ಅಭಿಷೇಕ ನಡೆಯಿತು.
ಸಮಾಜದ ಅಧ್ಯಕ್ಷ ರಾಜೇಂದ್ರ ಬೀಳಗಿ ಅಷ್ಟ ದ್ರವ್ಯ ಪೂಜೆ ನೆರವೇರಿಸಿದರು. ನಯನಾ ತಾಳಿಕೋಟಿ ಅಷ್ಟಕ ಗಾಯನ ಪ್ರಸ್ತುತ ಪಡಿಸಿದರು. ತವನಪ್ಪ ಪಂಡಿತ ಪೂಜಾ ವಿಧಿ ನೆರವೇರಿಸಿದರು.
ಶ್ರೇಣಿಕರಾಜ ರಾಜಮಾನೆ, ಬ್ರಹ್ಮಕುಮಾರ ಬೀಳಗಿ, ಮನ್ಮಥ ಗುಗ್ಗರಿ, ಮನ್ಮಥ ಕ್ಯಾಸಾ, ಅಜಯ ಬೀಳಗಿ, ಅಜಿತ ಮಾಲಗತ್ತಿ, ಮಹಾವೀರ ದಿನಕರ, ಸುಜಾತಾ ಗುಗ್ಗರಿ ವಿಜಯಲಕ್ಷ್ಮಿ ಬೀಳಗಿ, ಗೊಂಗಡಿ, ಅನ್ಯ ಶ್ರಾವಕ, ಶ್ರಾವಕಿಯರು ಉಪಸ್ಥಿತರಿದ್ದರು.