ಕೊಪ್ಪಳ: ನೌಕರರು ನಿಮ್ಮ ಇಲಾಖೆ ನಿಯಮಾವಳಿ, ಆಡಳಿತ ವೈಖರಿ ಅರಿತಲ್ಲಿ ಉತ್ತಮ ಆಡಳಿತಗಾರರಾಗಬಹುದು ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು.
ನಗರದ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಲಿಪಿಕ ನೌಕರರಿಗೆ ಹಮ್ಮಿಕೊಂಡಿದ್ದ ವೃತ್ತಿ ಬುನಾದಿ ತರಬೇತಿ ಕಾರ್ಯಕ್ರಮ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಇಲಾಖೆಯಲ್ಲಿನ ವಿವಿಧ ಸೇವೆ, ನೀತಿ, ನಿಯಮಗಳ ಬಗ್ಗೆ ಸರಿಯಾಗಿ ಅರಿಯಿರಿ. ಅಧ್ಯಯನ ನಡೆಸಿ ಅರ್ಥೈಸಿಕೊಂಡಲ್ಲಿ ಉತ್ತಮ ಆಡಳಿತಗಾರರಾಗಿ ಹೊರಹೊಮ್ಮಲು ಸಾಧ್ಯ. ಮೊದಲು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಕ್ಷೇತ್ರಗಳ ಬಗ್ಗೆ ತಿಳಿದುಕೊಳ್ಳಿ. ಸಮಯ ಪಾಲಿಸಿ. ಕಚೇರಿ ಕೆಲಸದಲ್ಲಿ ಲೋಪವಾಗದಂತೆ ನೋಡಿಕೊಳ್ಳಿ. ಆರೋಗ್ಯದ ಕಡೆ ಗಮನ ನೀಡಿ. ಕುಟುಂಬಕ್ಕೂ ಸಮಯ ಕೊಡಿ. ಸರ್ಕಾರ ಹೊರಡಿಸುವ ನಿಯಮ, ಮಾರ್ಗಸೂಚಿಗಳತ್ತ ಚಿತ್ತ ಇರಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ತರಬೇತಿ ಸಂಸ್ಥೆ ಪ್ರಾಚಾರ್ಯ ಕೃಫ್ಣಿಮೂರ್ತಿ ದೇಸಾಯಿ ಮಾತನಾಡಿ, ಪ್ರೀತಿ, ವಿಶ್ವಾಸ, ಮಾನವೀಯತೆ, ಸಂಬಂಧಗಳಿಗೆ ಬೆಲೆ ಕೊಡುವವರು ಸದಾ ಸುಖವಾಗಿರುತ್ತಾರೆ. ಕೆಲಸ, ಮನೆ ಹೀಗೆ ನಿಮ್ಮೊಂದಿಗಿರುವವರೊಂದಿಗೆ ಅದಾ ಪ್ರೀತಿ, ನಗುಮೊಗದಿಂದ ವ್ಯವಹರಿಸಿ. ಉತ್ಸಾಹದಿಂದ ಕಚೇರಿ ಕೆಲಸ ನಿರ್ವಹಿಸಿ ಎಂದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಲಕ್ಷ್ಮಿಕಾಂತ ಎನ್, ಬೋಧಕ ಎಂ. ಶ್ರೀಧರ ಇತರ ಸಂಪನ್ಮೂಲ ವ್ಯಕ್ತಿಗಳಿದ್ದರು.