ಜಿಲ್ಲೆ

ಆರೋಪಿ ಸತೀಶ್ ಪೊಲೀಸ್ ಕಸ್ಟಡಿ ಅಂತ್ಯ

ಮೈಸೂರು: ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಆರೋಪಿ ಸತೀಶ್ ಅಲಿಯಾಸ್ ಪಾಂಡುರಂಗನನ್ನು ಬಂಧಿಸಲಾಗಿದ್ದು, ನ್ಯಾಯಾಲಯ ಒಂದು ದಿನದ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಪೊಲೀಸ್ ಬಂದೋಬಸ್ತ್‌ನಲ್ಲಿ ಆರೋಪಿಯನ್ನು ಪೊಲೀಸರು ನಗರದ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಈ ವೇಳೆ ಸರ್ಕಾರಿ ಅಭಿಯೋಜಕಿ ಸವಿತಾ ಅವರು ವಾದ ಮಂಡಿಸಿ ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ಐದು ದಿನಗಳು ಪೊಲೀಸ್ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು.

ಇದಕ್ಕೆ ಆಕ್ಷೇಪವ್ಯಕ್ತಪಡಿಸಿದ ಸತೀಶ್ ಪರ ವಕೀಲ ಅ.ಮ.ಭಾಸ್ಕರ್ ಅವರು ಮಾಹಿತಿ ಪಡೆಯಲು ಕೆಲ ಗಂಟೆ ಸಾಕು. ಹಾಗಾಗಿ ಕೇವಲ ಮೂರು ಗಂಟೆ ಪೊಲೀಸ್ ಕಸ್ಟಡಿಗೆ ನೀಡುವಂತೆ ವಾದಸಿದರು. ಬಳಿಕ ನ್ಯಾಯಾಧೀಶೆ ಸರೋಜಾ, ಒಂದು ದಿನದ ಒಳಗೆ ಮಹಜರು ಕಾರ್ಯ ಮುಗಿಸಿ. ಕೃತ್ಯಕ್ಕೆ ಬಳಕೆಯಾದ ಮೊಬೈಲ್ ವಶಪಡಿಸಿಕೊಳ್ಳಿ, ಅಗತ್ಯ ಮಾಹಿತಿ ಪಡೆದುಕೊಳ್ಳುವಂತೆ ಆದೇಶ ಹೊರಡಿಸಿದರು.

ರಾಹುಲ್‌ಗಾಂಧಿ, ಅಖಿಲೇಶ್ ಯಾದವ್, ಅರವಿಂದ ಕ್ರೇಜಿವಾಲ್ ಅವರ ಅರೆನಗ್ನ ಪೋಟೋ ಹಾಕಿ ಅದರಲ್ಲಿ ಅರಬಿಕ್ ಅಕ್ಷರದಲ್ಲಿ ಬರೆದಿದ್ದರಿಂದ ಉದ್ರಿಕ್ತಗುಂಪು ಉದಯಗಿರಿ ಠಾಣೆಗೆ ಜಮಾಯಿಸಿ ಆರೋಪಿಯನ್ನು ಬಂಧಿಸುವಂತೆ ಗಲಾಟೆ ನಡೆಸಿ, ಕಲ್ಲು ತೂರಾಟ ನಡೆಸಿದ್ದರು. ಘಟನೆಯಲ್ಲಿ ಪೊಲೀಸರು, ವಾಹನಗಳು ಜಖಂಗೊಂಡಿದ್ದವು.

ಮತ್ತೆ ನಾಲ್ವರ ಬಂಧನ:

ಉದಯಗಿರಿ ಕಲ್ಲು ತೂರಾಟ ಪ್ರಕರಣ ಸಂಬಂಧ ಪೊಲೀಸರು ಮತ್ತೆ ನಾಲ್ವರನ್ನು ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.

ಜ.10ರಂದು ರಾತ್ರಿ ಉದಯಗಿರಿ ಪೊಲೀಸ್ ಠಾಣೆ, ಡಿಸಿಪಿ ಸೇರಿದಂತೆ ಪೊಲೀಸರ ವಾಹನಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ಸ್ಥಳದಲ್ಲಿದ್ದ ಸಿಸಿ ಕ್ಯಾಮರಾ, ಮೊಬೈಲ್‌ನಲ್ಲಿ ಸೆರೆಯಾದ ದೃಶ್ಯಗಳನ್ನು ಆಧರಿಸಿ ನೂರಕ್ಕೂ ಹೆಚ್ಚು ಜನರನ್ನು ನಗರ ಅಪರಾಧ ಪತ್ತೆ ದಳ(ಸಿಸಿಬಿ) ಪೊಲೀಸರು ಗುರುತಿಸಿದ್ದು, ಮನೆಗಳ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗುತ್ತಿದೆ. ಅಲ್ಲದೆ ಒಂದು ಸಾವಿರ ಜನರ ವಿರುದ್ಧ ಎಫ್‌ಐಆರ್ ಕೂಡ ದಾಖಲಿಸಲಾಗಿದೆ.