ಬೆಂಗಳೂರು: ಕಾರ್ ಪೂಲಿಂಗ್‌ಗೆ ಸಂಸದ ತೇಜಸ್ವಿ ಸೂರ್ಯ ಬೆಂಬಲ ನೀಡಿರುವುದನ್ನು ವಿರೋಧಿಸಿ ಆಟೋಗೆ ಪೋಸ್ಟರ್ ಅಂಟಿಸುತ್ತಿದ್ದ ಚಾಲಕನನ್ನು ತಡೆದು ಬೆದರಿಕೆ ಹಾಕಿರುವ ಆರೋಪದಡಿ ಮಾಜಿ ಕಾರ್ಪೋರೇಟರ್ ಸಂಗಾತಿ ವೆಂಕಟೇಶ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆಟೋ ಚಾಲಕ ಮನೋಜ್ ಕುಮಾರ್ ನೀಡಿರುವ ದೂರಿನನ್ವಯ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನಲ್ಲಿ ಏನಿದೆ?
ದೂರುದಾರ ಮನೋಜ್ ಕುಮಾರ್ ನ. ೧೭ರಂದು ಶಂಕರ್‌ನಾಗ್ ಸರ್ಕಲ್ ಬಳಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದಾಗ ಆಟೋವನ್ನು ಸಂಗಾತಿ ವೆಂಕಟೇಶ್ ಕಡೆಯವರು ತಡೆದಿದ್ದಾರೆ. ಈ ವೇಳೆ ಮನೋಜ್ ಕುಮಾರ್ ಹಾಗೂ ಇತರ ಕೆಲ ಚಾಲಕರು ತಮ್ಮ ಆಟೋ ಹಿಂದೆ ಹಾಕಲಾಗಿದ್ದ ‘‘ಕಾರ್ ಪೂಲಿಂಗ್ ವ್ಯವಸ್ಥೆಗೆ ಬೆಂಬಲ ನೀಡಿರುವ ತೇಜಸ್ವಿ ಸೂರ್ಯಗೆ ಧಿಕ್ಕಾರ’ ಎಂಬ ಪೋಸ್ಟರ್ ಕಿತ್ತೆಸೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಳಿಕ ಸ್ಥಳಕ್ಕೆ ಸಂಗಾತಿ ವೆಂಕಟೇಶ್ ಅವರನ್ನು ಕರೆಸಿಕೊಂಡಿದ್ದಾರೆ. ಈ ವೇಳೆ ವೆಂಕಟೇಶ್ ಕಡೆಯವರು ಮತ್ತೊಮ್ಮೆ ನಮ್ಮ ಏರಿಯಾಗೆ ಬಂದರೆ ಕತ್ತರಿಸಿ ಬಿಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೂರಿನ ಮೇರೆಗೆ ಆಟೋ ಚಾಲಕನಿಗೆ ಹಲ್ಲೆ ಹಾಗೂ ಕೊಲೆ ಬೆದರಿಕೆ ಹಾಕಿದ ಆರೋಪದಡಿ ಸಂಗಾತಿ ವೆಂಕಟೇಶ್ ಮತ್ತವರ ಬೆಂಬಲಿಗರ ವಿರುದ್ಧ ಹನುಮಂತನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಏನಿದು ಕಾರ್ ಪೂಲಿಂಗ್?
ಪ್ರತಿನಿತ್ಯ ತಮ್ಮ ಕೆಲಸಗಳಿಗೆ ತೆರಳುವವರು ಒಂದೊಂದು ಕಾರಿನಲ್ಲಿ ತೆರಳುವ ಬದಲು ಅದೇ ಮಾರ್ಗದಲ್ಲಿ ತೆರಳುವವರನ್ನ ಜೊತೆಗೆ ಕರೆದೊಯ್ಯಬಹುದು. ಇದೇ ರೀತಿ ಹೊಂದಾಣಿಕೆಯಲ್ಲಿ ನಿತ್ಯ ಒಬ್ಬೊಬ್ಬರು ತಮ್ಮ ಕಾರುಗಳನ್ನ ಬಳಸಿಕೊಳ್ಳಬಹುದು. ಇದರಿಂದಾಗಿ ಸಂಚಾರ ದಟ್ಟಣೆ ಕಡಿಮೆಯಾಗುತ್ತದೆ. ಈಗಾಗಲೇ ಮುಂಬೈ, ಬೆಂಗಳೂರು ಸೇರಿ ವಿವಿಧ ನಗರಗಳ ಐಟಿ ಉದ್ಯೋಗ ವಲಯದಲ್ಲಿ ಕಾರ್ ಪೂಲಿಂಗ್ ಹೆಚ್ಚು ಜನಪ್ರಿಯತೆ ಗಳಿಸುತ್ತಿದೆ. ಈ ವ್ಯವಸ್ಥೆಯನ್ನು ನಿಷೇಧಿಸದಂತೆ ಸಂಸದ ತೇಜಸ್ವಿ ಸೂರ್ಯ ಇತ್ತೀಚೆಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಸಂಸದರ ಬೆಂಬಲವನ್ನು ವಿರೋಧಿಸಿದ್ದ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿತ್ತು.