ಮಂಗಳೂರು: ಮಹಿಳೆಯೋರ್ವರನ್ನು ಕೊಲೆಗೈದ ಪ್ರಕರಣದಲ್ಲಿ ಆರೋಪಿಯಾಗಿದ್ದ ಶೇಖರ ಶೆಟ್ಟಿ ಎಂಬಾತನನ್ನು ಮಂಗಳೂರಿನ ಮಾನ್ಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಖುಲಾಸೆ ಗೊಳಿಸಿದೆ.
ನಿಡ್ಡೋಡಿಯ ಯಮುಲ ಮನೆ ನಿವಾಸಿ ರೇವತಿ ಎಂಬಾಕೆಯನ್ನು ಪಡ್ಲಗುರಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿದ್ದ.
ಪ್ರಕರಣದ ಹಿನ್ನೆಲೆ: 2016ರ ಜ.12ರಂದು ನಿಡ್ಡೋಡಿಯ ಯಮುಲ ಮನೆ ನಿವಾಸಿ ರೇವತಿ ಎಂಬಾಕೆಯು ನಿಡ್ಡೋಡಿಗೆ ಹೋಗಿ ಬರುವುದಾಗಿ ಮನೆಯಿಂದ ಹೊರಟು ಹೋಗಿ ಪುನಃ ಮನೆಗೆ ಹಿಂತಿರುಗಿಲ್ಲ. ಈ ಬಗ್ಗೆ ರೇವತಿ ಅಣ್ಣ ತಿಮ್ಮಪ್ಪ ಮಡಿವಾಳ ಅವರು ಮೂಡುಬಿದಿರೆ ಠಾಣೆಗೆ ನಾಪತ್ತೆ ದೂರು ನೀಡಿದ್ದರು. ಆ ದೂರಿನಲ್ಲಿ ಸ್ಥಳೀಯ ಶುಂಠಿಲ ಪದವಿನ ನಿವಾಸಿ ಶೇಖರ ಶೆಟ್ಟಿ ಮೇಲೆ ಸಂಶಯವಿರುವುದಾಗಿ ತಿಳಿಸಿದ್ದರು. ಶೇಖರ ಶೆಟ್ಟಿಯನ್ನು ಈ ಬಗ್ಗೆ ಕೂಲಂಕಷವಾಗಿ ವಿಚಾರಿಸಿದಾಗಲೂ ಆತನು ಯಾವುದೇ ಮಾಹಿತಿ ನೀಡಿರುವುದಿಲ್ಲ. ಈ ಮಧ್ಯೆ ಶೇಖರ ಶೆಟ್ಟಿ ಮನೆಯನ್ನು ಬಿಟ್ಟು ಹೋಗಿದ್ದು ಈ ಬಗ್ಗೆ ಅವರ ಪತ್ನಿ ದಯಾವತಿ ಶೇಖರ ಶೆಟ್ಟಿ ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿದ್ದರು. ನಂತರ ಶೇಖರ ಶೆಟ್ಟಿ 2016 ಜ.18ರಂದು ಠಾಣೆಗೆ ಹಾಜರಾಗಿದ್ದರು.
* ತಪ್ಪೊಪ್ಪಿದ ಆರೋಪಿ: ಮೂಡಬಿದ್ರೆ ಪೋಲಿಸರು ಶೇಖರ ಶೆಟ್ಟಿಯನ್ನು ಬಂಧಿಸಿ ವಿಚಾರಿಸಿದಾಗ ಆತನು ತನ್ನ ತಪ್ಪನ್ನು ಒಪ್ಪಿಕೊಂಡು ರೇವತಿಯು ಬೀಡಿ ಬ್ರಾಂಚಿಗೆಂದು ಶುಂಠಿಲ ಪದವಿಗೆ ಬರುತ್ತಿರುವಾಗ ತನಗೆ ಪರಿಚಯವಾಗಿದ್ದು ನಂತರ ತುಂಬಾ ಅನ್ನೋನ್ಯವಾಗಿದ್ದಳು. ಶೇಖರ ಶೆಟ್ಟಿಗೆ ಹಣದ ಸಮಸ್ಯೆಯಾದಾಗ ರೇವತಿಯ ಬಂಗಾರವನ್ನು ಪಡೆದು ಅಡವಿಟ್ಟು ಸಾಲ ಪಡೆಯುತ್ತಿದ್ದು, 2015ರ ನವೆಂಬರ ತಿಂಗಳಲ್ಲಿ ರೇವತಿ ತನಗೆ ಚಿನ್ನದ ಸರವನ್ನು ನೀಡಿದ್ದು ಅದನ್ನು ಮಾತೃ ಭೂಮಿ ಸಹಕಾರಿ ಸಂಘದಲ್ಲಿ ಅಡವಿಟ್ಟು ಸಾಲ ಪಡೆದಿದ್ದನು. ಆ ಚಿನ್ನದ ಸರವನ್ನು ಬಿಡಿಸಿಕೊಡುವಂತೆ ಆಗಾಗ್ಗೆ ಒತ್ತಡ ಹೇರಿದ್ದರಿಂದ ರೇವತಿಯನ್ನು 2016ರ ಜ.12ರಂದು ಪಡ್ಲಗುರಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡು ಪೋಲಿಸರನ್ನು ಪಡ್ಡಗುರಿಗೆ ಕರೆದುಕೊಂಡು ಹೋಗಿ ರೇವತಿಯ ಶವವನ್ನು ತೋರಿಸಿದ್ದ.
ಈ ಪ್ರಕರಣದಲ್ಲಿ ಆರೋಪಿ ಪರ ವಕೀಲರು ವಾದ ಮಂಡಿಸಿದ್ದು, ಡಿಎನ್‌ಎ ವರದಿಯಲ್ಲಿ ತನಿಖಾಧಿಕಾರಿಯವರು ಕಳುಹಿಸಿಕೊಟ್ಟಿದ್ದ ರೇವತಿಯ ಶವದ ಜೈವಿಕ ಅಂಶಗಳು ಪರೀಕ್ಷೆಗೆ ಸಮರ್ಪಕವಾಗಿರಲಿಲ್ಲ ಎಂಬುದಾಗಿ ವರದಿ ನೀಡಿದ್ದವು. ಈ ಕಾರಣದಿಂದ ಮಾನ್ಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಸ್ವಾಮಿ ಪ್ರಕರಣವನ್ನು ಸಾಬೀತು ಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಲವಾಗಿದೆ ಎಂಬುದನ್ನು ಮನಗಂಡು ಆರೋಪಿಯನ್ನು ಖುಲಾಸೆ ಗೊಳಿಸಿದ್ದಾರೆ.
ಆರೋಪಿ ಪರವಾಗಿ ವಕೀಲರಾದ ವೇಣುಕುಮಾರ್ ಮತ್ತು ಯುವರಾಜ್ ಕೆ. ಅಮೀನ್ ವಾದಿಸಿದ್ದರು.