ಬೆಂಗಳೂರು: ದಾಸರಹಳ್ಳಿ ಮತಕ್ಷೇತ್ರದಲ್ಲಿ ಕೋವಿಡ್ ವೇಳೆ ವಿವಿಧ ಬಿಲ್ ಪಾವತಿಯಲ್ಲಿ ಲೋಪ-ದೋಷ ಉಂಟಾಗಿದ್ದು, ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲು ತನಿಖೆ ನಡೆಸುವಂತೆ ಕೋರಿ ಮಾಜಿ ಶಾಸಕ ಆರ್.ಮಂಜುನಾಥ್ ಅವರು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.
ಕೋವಿಡ್ ನಿರ್ವಹಣೆಗೆಂದು ಬಿಬಿಎಂಪಿಯಿಂದ 10,100 ಬೆಡ್‌ಗಳುಳ್ಳ ಕೋವಿಡ್ ಕೇರ್ ಸೆಂಟರ್‌ಅನ್ನು ಬಿಐಇಸಿಯಲ್ಲಿ ಸ್ಥಾಪಿಸಲಾಗಿತ್ತು. ಇದಕ್ಕೆ ಸಂಬಂಧಿಸಿ ಪಾಲಿಕೆಯ ಕಲ್ಯಾಣ ವಿಭಾಗದಿಂದ ಹಲವು ಬಿಲ್‌ಗಳು ಅನುಮೋದನೆ ಆಗಿವೆ. ಈ ವಿಷಯವಾಗಿ ಆ ಸಮಯದಲ್ಲೇ ತನಿಖೆ ನಡೆಸುವಂತೆ ಕೋರಿ ಆಗಿನ ಪಾಲಿಕೆ ಮುಖ್ಯಸ್ಥರಿಗೆ ಪತ್ರ ಬರೆದಿದ್ದರೂ, ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಕೋವಿಡ್ ಲೋಪ-ದೋಷಗಳ ಕುರಿತು ತನಿಖೆ ನಡೆಸಬೇಕು ಎಂದು ಅವರು ಸಿಎಂರನ್ನು ಒತ್ತಾಯಿಸಿದ್ದಾರೆ.
ಪ್ರಸ್ತುತ ತನಿಖೆಯನ್ನು ಸ್ವತಂತ್ರ ಸಂಸ್ಥೆಯಾದ ಸಿಎಜಿ ನಡೆಸಬೇಕು. ಕೋವಿಡ್ ಕೇರ್ ಸೆಂಟರ್ ನಿರ್ವಹಣೆ ವಿಚಾರದಲ್ಲಿ ಜವಾಬ್ದಾರಿ ವಹಿಸಿದ್ದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ ಅವರಿಂದಲೇ ನಷ್ಟ ಭರಿಸಿಕೊಳ್ಳಬೇಕು ಎಂದು ಮಾಜಿ ಶಾಸಕರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.