ಕೋಲಾರ/ಕದಿರೀಪುರ: ತಾಲೂಕಿನ ಮಠಪುರ ಸಮೀಪದ ಬೆಟ್ಟದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ, ಜಲ್ಲಿ ಕ್ರಷರ್ ನಿರ್ಮಾಣದ ಕೆಲಸ ನಡೆಯುತ್ತಿದ್ದು, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಸರ್ಕಾರಿ ಗೋಮಾಳ ಜಮೀನಿನಲ್ಲಿ ಅನಧಿಕೃತವಾಗಿ ಅಕ್ರಮ ಕಲ್ಲು ಗಣಿಗಾರಿಕೆ ಮತ್ತು ಜಲ್ಲಿ ಕ್ರಷರ್ ಕಾಮಗಾರಿ ನಡೆಯುತ್ತಿದ್ದು, ಪ್ರಭಾವಿ ರಾಜಕಾರಣಿ ಮಾಲೀಕತ್ವದಾಗಿದ್ದು, ಇದನ್ನು ತಡೆದು ಗ್ರಾಮಸ್ಥರನ್ನು ಆತಂಕದಿಂದ ಪಾರು ಮಾಡಬೇಕು ಎಂದು ಮಠಪುರ ಮತ್ತು ಸೀತಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಬಂಡೆಗಳನ್ನು ಸ್ಫೋಟಿಸಲು ಸಿಡಿಮದ್ದು ಉಪಯೋಗಿಸುತ್ತಿದ್ದಾರೆ. ಕಲ್ಲು ಬಂಡೆಗಳ ಬ್ಲಾಸ್ಟಿಂಗ್ ಮಾಡುತ್ತಿದ್ದು ಸುಮಾರು ಒಂದರಿಂದ ಎರಡು ಕಿಲೋ ಮೀಟರ್ನಷ್ಟು ದೂರ ಕಲ್ಲುಗಳು ಚದುರುತ್ತವೆ. ಗ್ರಾಮದ ಮನೆಗಳ ಮೇಲೆ ಕಲ್ಲು ಬಿದ್ದು ಮನೆಗಳು ಬಿರುಕು ಬಿಟ್ಟಿವೆ. ಕಲ್ಲುಗಳ ಬ್ಲಾಸ್ಟಿಂಗ್ ಸಮಯದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದಿಲ್ಲ. ಮನೆಗಳ ಮೇಲ್ಛಾವಣಿ ಸಿಮೆಂಟ್ ಶೀಟ್ಗಳಿಂದ ನಿರ್ಮಿಸಿದ್ದು, ಸೀಟ್ಗಳು ಪುಡಿ ಪುಡಿಯಾಗಿವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲ್ಲುಬಂಡೆ ಬ್ಲಾಸ್ಟಿಂಗ್ ಶಬ್ದಕ್ಕೆ ಮಕ್ಕಳು, ವಯೋವೃದ್ಧರು ಭಯಭೀತರಾಗಿ ನಡುಗುತ್ತಿದ್ದು, ರಾತ್ರಿ ಜಾಗರಣೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಇದಲ್ಲದೆ ಗ್ರಾಮಕ್ಕೆ ನೀರು ಶೇಖರಣೆ ಮಾಡುವ ನೀರಿನ ಓವರ್ ಟ್ಯಾಂಕ್ ಸಹ ಹಾನಿಯಾಗಿದೆ. ಸೀತಿ ಗ್ರಾಮ ಪಂಚಾಯಿತಿಯಿಂದ ಕಸ ವಿಲೇವಾರಿ ಘಟಕವನ್ನು ನಿರ್ಮಾಣ ಮಾಡಲಾಗಿದ್ದು, ಕಲ್ಲುಗಣಿಗಾರಿಕೆಯಿಂದ ಹಾನಿಯಾಗುವ ಸಾಧ್ಯತೆ ಇದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಹೊಸಕೋಟೆ ಮೂಲದ ಕಂಪನಿಯ ಪಾಲುದಾರರೊಬ್ಬರು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಎಷ್ಟೇ ಮನವಿ ಸಲ್ಲಿಸಿದರೂ ಗಮನಹರಿಸದೆ ತಟಸ್ಥವಾಗಿರುವುದು ಪ್ರಭಾವಿ ರಾಜಕಾರಣಿಗಳ ಕೈವಾಡವಿರುವುದಾಗಿ ಸಂಶಯ ಮೂಡುತ್ತಿದೆ ಎಂದು ದೂರಿದರು.ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಕಿವಿ ಕೇಳಿಸದೆ ಕಿವುಡರಂತೆ, ಕಣ್ಣು ಕಾಣದ ಕುರುಡರಂತೆ ನಟಿಸುತ್ತಿದ್ದಾರೆ. ಅಕ್ರಮ ಕಲ್ಲು ಗಣಿಗಾರಿಕೆ ಮಾಲೀಕರೊಂದಿಗೆ ಶಾಮಿಲಾಗಿರುವ ಅನುಮಾನ ವ್ಯಕ್ತವಾಗಿದೆ.
ದೂರು ನೀಡಿದರೂ ಕ್ರಮವಿಲ್ಲ: ಅಕ್ರಮ ಕಲ್ಲುಗಾಣಿಕೆ ನಡೆಯುತ್ತಿರುವ ಜಾಗದಿಂದ 500 ಮೀಟರ್ ಅಂತರದಲ್ಲಿ ವೇಮಗಲ್ ಮತ್ತು ಕೈವಾರ ಮುಖ್ಯ ರಸ್ತೆ ಹಾದು ಹೋಗಿದ್ದು ಸಾರಿಗೆ ಬಸ್ಸುಗಳು, ವೇಮಗಲ್ ಮತ್ತು ನರಸಾಪುರ ಕೈಗಾರಿಕಾ ಕಂಪನಿ ಬಸ್ಸುಗಳು, ಖಾಸಗಿ ವಾಹನಗಳು, ಶಾಲಾ ವಾಹನಗಳು, ದ್ವಿಚಕ್ರವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಕಲ್ಲುಗಳ ಬ್ಲಾಸ್ಟಿಂಗ್ನಿಂದ ರಸ್ತೆಗೆ ಕಲ್ಲು ತೂರಿ ಬರುತ್ತಿದ್ದು, ಕಿರಿಕಿರಿ ಉಂಟಾಗಿದೆ. ಈ ಬಗ್ಗೆ ಗಣಿ ಮತ್ತು ಭೂವಿಜ್ಞಾನಿಗಳ ಇಲಾಖೆ ಅಧಿಕಾರಿಗಳು, ರಾಜ್ಯ ಮಾಲಿನ್ಯ ನಿಯಂತ್ರಣ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಕ್ರಮಕೈಗೊಂಡಿಲ್ಲ ಎಂದು ಅಖಿಲ ಕರ್ನಾಟಕ ದಲಿತ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಠಪುರ ಶ್ರೀನಿವಾಸ್ ಆರೋಪಿಸಿದ್ದಾರೆ.
ದಾಖಲೆ ಪರಿಶೀಲಿಸಿ ಕ್ರಮ: 112 ಸಹಾಯವಾಣಿಗೆ ಕರೆ ಮಾಡಿದಾಗ ಸ್ಥಳಕ್ಕೆ ಬಂದ ವೇಮಗಲ್ ಠಾಣೆ ಪೊಲೀಸರು ಕೆಲಸವನ್ನು ನಿಲ್ಲಿಸುವಂತೆ ಕಾರ್ಮಿಕರಿಗೆ ಸೂಚಿಸಿದ್ದು, ಗ್ರಾಮಸ್ಥರು ಮತ್ತು ಜಲ್ಲಿ ಕ್ರಷರ್ ಮಾಲೀಕರು ಠಾಣೆಗೆ ದಾಖಲಾತಿ ತೆಗೆದುಕೊಂಡು ಬಂದಲ್ಲಿ ಪರಿಶೀಲಿಸಿ ಕ್ರಮಜರುಗಿಸಲಾಗುವುದು ಎಂದು ಭರವಸೆ ನೀಡಿದರು.
ಮಠಪುರ ಗ್ರಾಮಸ್ಥರಾದ ಸುಬ್ಬರೆಡ್ಡಿ, ವೆಂಕಟರಾಮ್, ಬೈರೇಗೌಡ, ಗಂಗಿರೆಡ್ಡಿ, ಅನಂತ್ಕುಮಾರ್, ಮುನಿಯಪ್ಪ, ಅನಿಲ್ಕುಮಾರ್, ಶ್ರೀನಿವಾಸ್ ರಮೇಶ್ , ಮುನಿನರಸಮ್ಮ ಇದ್ದರು.