ಜಿಲ್ಲೆ

ಮನೆ ಕಳ್ಳನ ಬಂಧನ; 7 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

ಉಡುಪಿ: ಬ್ರಹ್ಮಾವರ ಹಾಗೂ ಕೋಟ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಿರುವ ಪೊಲೀಸರು ಒಟ್ಟು 7 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ಕಾಡೂರು ಗ್ರಾಮದ ಬಾಯರ್‌ಬೆಟ್ಟು ತಂತ್ರಾಡಿ ನಿವಾಸಿ ವಿಜಯ ಕುಮಾರ್ ಶೆಟ್ಟಿ ಬಂಧಿತ ಆರೋಪಿ. ಈತನನ್ನು ಸೋಮವಾರ ಸಾಯಂಕಾಲ ನೀಲಾವರ ಕ್ರಾಸ್ ಬಳಿ ವಶಕ್ಕೆ ಪಡೆಯಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಿದಾಗ 5 ಪ್ರಕರಣಗಳು ಬೆಳಕಿಗೆ ಬಂದಿವೆ.
ಮಾರ್ಚ್‌ನಲ್ಲಿ ಕಾಡೂರು ಗ್ರಾಮದ ತಂತ್ರಾಡಿ ಸದಾಶಿವ ಮಹಾಬಲೇಶ್ವರ ರಾವ್ ಅವರ ಹಳೇ ಮನೆಯ ಬಾಗಿಲಿನ ಚಿಲಕ ಮುರಿದು ಒಳ ಪ್ರವೇಶಿಸಿ ಸುಮಾರು 280 ಕೆಜಿ ತೂಕದ ರೂ. 1.40 ಲಕ್ಷ ಮೌಲ್ಯದ ಏಳು ಮೂಟೆ ಕಾಳು ಮೆಣಸು ಚೀಲ ಕಳವು ಮಾಡಿದ್ದಾನೆ. ಜುಲಾಯಿ ತಿಂಗಳಲ್ಲಿ ನಡೂರು ಪಟೇಲ್ ಅಂತಯ್ಯ ಶೆಟ್ಟಿ ಸ್ಮಾರಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೀಗ ಮುರಿದು ಗ್ಯಾಸ್ ಸಿಲಿಂಡರ್ ಕಳವು ಮಾಡಿದ್ದಾನೆ. ಯಡ್ತಾಡಿ ಗ್ರಾಮದ ದಾಲಾಡಿ ವಾಣಿ ಭಂಡಾರಿ ಅವರ ಮನೆಯಲ್ಲಿ ರಾತ್ರಿ ಸಮಯ ಲೈಟ್ ಇಲ್ಲದೇ ಇದ್ದುದನ್ನು ಗಮನಿಸಿ ಮುಖ್ಯ ದ್ವಾರದ ಬೀಗ ಮುರಿದು ಒಳ ಪ್ರವೇಶಿಸಿ ಸುಮಾರು 5,04,000 ರೂ. ಮೌಲ್ಯದ ಚಿನ್ನಾಭರಣ ಹಾಗೂ 15000 ರೂ. ನಗದನ್ನು ಕದ್ದು ಪರಾರಿಯಾಗಿದ್ದಾನೆ. ನವೆಂವರ್ ತಿಂಗಳಿನಲ್ಲಿ ಕೋಟ ಠಾಣಾ ವ್ಯಾಪ್ತಿಯ ಬಿಲ್ಲಾಡಿ ಸುಜಾತ ಶೆಟ್ಟಿ ಮನೆ ಕಳ್ಳತನ, ಆರೂರು ಗ್ರಾಮದ ಮೇಲಡ್ಪು ಭಾಸ್ಕರ ಶೆಟ್ಟಿ ಅವರ ಮನೆಯಲ್ಲಿ 31,000 ರೂ. ಮೌಲ್ಯದ ಚಿನ್ನ, ಬೆಳ್ಳಿಯ ಆಭರಣ ಮತ್ತು ಸೀರೆ ಹಾಗೂ 5000 ನಗದು ಕಳವು ಮಾಡಿರುವ ಬಗ್ಗೆ ಬಾಯಿ ಬಿಟ್ಟಿದ್ದಾನೆ.

ಸ್ವಾಧೀನಪಡಿಸಿದ ಸೊತ್ತುಗಳ ವಿವರ
30 ಸಾವಿರ ರೂ. ಮೌಲ್ಯದ ಹೋಂಡಾ ಮ್ಯಾಟ್ರಿಕ್ಸ್ ಸ್ಕೂಟರ್, ಕಳವು ಮಾಡಿದ 4,64,700 ರೂ. ಮೌಲ್ಯದ ಚಿನ್ನಾಭರಣ, 2080 ರೂ. ಮೌಲ್ಯದ ಬೆಳ್ಳಿ ನಾಣ್ಯಗಳು, 9,000 ರೂ. ಮೌಲ್ಯದ ಸೀರೆ, ಕಾಳುಮಣಸಿನ ಮಾರಾಟದಿಂದ ಪಡೆದ 84,000 ರೂ., 2,800 ರೂ. ಮೌಲ್ಯದ ಗ್ಯಾಸ್ ಸಿಲಿಂಡರ್.

ಈತನ ಮೇಲೆ ಈ ಹಿಂದೆ ದ.ಕ ಜಿಲ್ಲೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ, ಮಂಗಳೂರು ಬಂದರು ಪೊಲೀಸ್ ಠಾಣೆಯಲ್ಲಿ 4 ಪ್ರಕರಣ, ಚಿಕ್ಕಮಂಗಳೂರು ಜಿಲ್ಲೆ ಎನ್ ಆರ್ ಪುರ ಠಾಣೆಯಲ್ಲಿ 1 ಪ್ರಕರಣ, ಹರಿಹರ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ, ಶಿವಮೊಗ್ಗ ಜಿಲ್ಲೆ ಆಗುಂಬೆ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ, ತುಂಗಾ ನಗರ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ, ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ 1 ಕಳವು ಪ್ರಕರಣ ದಾಖಲಾಗಿದೆ. ಹೆಚ್ಚಿನ ಪ್ರಕರಣಗಳಲ್ಲಿ ಆರೋಪಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದು , ಜಾಮೀನು ರಹಿತ ವಾರಂಟ್ ಜಾರಿಯಾಗಿತ್ತು.