ಜಿಲ್ಲೆ

62 ಲಕ್ಷ ರೂ ವಂಚನೆ ಮಾಡಿದ ಆರೋಪ: ಐಶ್ವರ್ಯಗೌಡ ವಿರುದ್ಧ ಎಫ್‌ಐಆರ್ ದಾಖಲು

ಮಂಡ್ಯ: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರುಗಾವಲು ಮೂಲದ ಐಶ್ವರ್ಯಗೌಡ, ಆಕೆಯ ಪತಿ ಮತ್ತು ಸಹೋದರನ ವಿರುದ್ಧ ಮಂಡ್ಯ ಪೂರ್ವ ಠಾಣೆಯಲ್ಲಿ ಮಂಗಳವಾರ ಎಫ್‌ಐಆರ್ ದಾಖಲಾಗಿದೆ.

ನಗರದ ಗುತ್ತಲು ಬಡಾವಣೆಯ ರವಿಕುಮಾರ್ ಹಾಗೂ ಅರ್ಕೇಶ್ವರನಗರದ ಪೂರ್ಣಿಮಾ ಎಂಬುವರಿಂದ 55 ಲಕ್ಷ ರೂ ನಗದು ಹಾಗೂ ಏಳು ಲಕ್ಷ ರೂ ಮೌಲ್ಯದ ಚಿನ್ನಾಭರಣ ಪಡೆದು ವಂಚಿಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಐಶ್ವರ್ಯಗೌಡ, ಪತಿ ಹರೀಶ್, ಸಹೋದರ ಹಳ್ಳಿ ಮಂಜು ವಿರುದ್ದ ದೂರು ದಾಖಲಿಸಲಾಗಿದೆ.

ಹಲವು ರಾಜಕೀಯ ನಾಯಕರು ತನಗೆ ಪರಿಚಯವಿದ್ದಾರೆ. ಅವರ ಮೂಲಕ ಸಹಾಯ ಮಾಡಿಸುತ್ತೇನೆಂದು ನಂಬಿಸಿರುವ ಆರೋಪ ಕೇಳಿಬಂದಿದೆ. ಮಾತ್ರವಲ್ಲದೆ ರಿಯಲ್ ಎಸ್ಟೇಟ್ ಉದ್ಯಮ ಮಾಡುತ್ತಿದ್ದು, ಒಂದೆರೆಡು ವರ್ಷದಲ್ಲಿ ಲಾಭ ಮಾಡಿಕೊಡುವುದಾಗಿ ಹೇಳಿ 2016 ರಿಂದ 2019ರವರೆಗೆ ಹಂತ ಹಂತವಾಗಿ ಹಣ ಪಡೆದಿದ್ದಾರೆ. ಈ ಪೈಕಿ ರವಿಕುಮಾರ್ ಬಳಿ 40 ಲಕ್ಷ ರೂ, ಪೂರ್ಣಿಮಾ ಬಳಿ 100 ಗ್ರಾಂ ಚಿನ್ನ ಹಾಗೂ 15 ಲಕ್ಷ ರೂ ಪಡೆದುಕೊಳ್ಳಲಾಗಿದೆ. ಆದರೆ ವಾಪಸ್ ಕೊಟ್ಟಿಲ್ಲ. ಆದ್ದರಿಂದ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ದೂರು ಸಲ್ಲಿಸಿದ್ದರು. ಅದರಂತೆ ಐಪಿಸಿ ಸೆಕ್ಷನ್ 406, 417, 420, 120ಬಿ, 504, 34 ಅಡಿ ಮೊಕದ್ದಮೆ ದಾಖಲು ಮಾಡಿಕೊಳ್ಳಲಾಗಿದೆ.