ಜಿಲ್ಲೆ

ಮಹಿಳೆ ಅಧಿಕಾರಿಗೆ ನಂಬಿಸಿ ಹಣ ಪಡೆದು ವಂಚಿಸಿದ ಆರೋಪಿ: ಬ್ಯಾಂಕಿನಿಂದ 7 ಲಕ್ಷ ರೂ.ಸಾಲ ಪಡೆದು ಧೋಖಾ

ಬೆಂಗಳೂರು: ಸರ್ಕಾರಿ ಮಹಿಳಾ ಅಧಿಕಾರಿಯ ಬಳಿ ವ್ಯಕ್ತಿಯೊಬ್ಬ ತನ್ನ ವೈಯಕ್ತಿಕ ಸಮಸ್ಯೆ ಹೇಳಿಕೊಂಡು ತಾನೇ ಇಎಂಐ ಪಾವತಿಸುವುದಾಗಿ ನಂಬಿಸಿ ಬ್ಯಾಂಕಿನಿಂದ ೭ ಲಕ್ಷ ರೂ.ಸಾಲ ತೆಗೆಸಿಕೊಂಡು ಬಳಿಕ ಇಎಂಐ ಪಾವತಿಸದೆ ಹಾಗೂ ಹಣವನ್ನೂ ವಾಪಾಸ್ ನೀಡದೆ ವಂಚಿಸಿದ್ದಾನೆ.
ವಂಚನೆಗೆ ಒಳಗಾದ ಮಹಿಳಾ ಅಧಿಕಾರಿ ಈ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ನೀರಾವರಿ ಇಲಾಖೆಯ ಪ್ರಥಮದರ್ಜೆ ಸಹಾಯಕಿ ಫಾತೀಮಾ ಅಲ್ವಿ ಎಂಬುವವರು ನೀಡಿದ ದೂರಿನ ಮೇರೆಗೆ ಮಂಡ್ಯ ಜಿಲ್ಲೆ ನಾಗಮಂಗಲದ ನೂರ್ ಮೊಹಮದ್(೨೬) ಎಂಬಾತನ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ದೂರುದಾರೆ ಫಾತೀಮಾ ಅಲ್ವಿ ಅವರ ಮೂರು ವರ್ಷದ ಮಗಳಿಗೆ ರಸ್ತೆ ಅಪಘಾತದಲ್ಲಿ ಎಡಗೈಗೆ ಗಾಯವಾಗಿ ಚಿಕಿತ್ಸೆ ಕೊಡಿಸಿದರೂ ವಾಸಿಯಾಗಿರಲಿಲ್ಲ. ಈ ನಡುವೆ ಫಾತೀಮಾ ಅವರ ಎದುರು ಮನೆ ನಿವಾಸಿ ಸಾನಿಯಾ ಎಂಬುವವರು ಆರೋಪಿ ನೂರ್ ಮೊಹಮದ್ ಬಗ್ಗೆ ತಿಳಿಸಿದ್ದಾರೆ. ಆತ ಹಜರತ್ ಆಗಿದ್ದು, ಆತನಿಂದ ಚಿಕಿತ್ಸೆ ಪಡೆದರೆ ಮಗಳು ಗುಣಮುಖವಾಗಲಿದ್ದಾಳೆ ಎಂದು ಹೇಳಿದ್ದಾರೆ. ಅದರಂತೆ ಫಾತೀಮಾ ಅವರು ನಾಗಮಂಗಲದ ಹಜರತ್ ನೂರ್ ಮೊಹಮದ್ ಅವರನ್ನು ಭೇಟಿಯಾಗಿದ್ದು, ಆತ ನೀಡಿದ ಚಿಕಿತ್ಸೆಯಿಂದ ಮಗಳ ಗಾಯ ವಾಸಿಯಾಗಿದೆ. ಇದರ ನಡುವೆ ಕೌಟುಂಬಿಕ ಕಲಹದಿಂದ ಫಾತೀಮಾ ಅವರ ಪತಿ ದೂರುವಾಗಿರುವ ವಿಚಾರ ತಿಳಿದುಕೊಂಡ ನೂರ್ ಮೊಹಮದ್, ಪತಿ ನಿನ್ನ ಜತೆ ಇರುವಂತೆ ಮಾಡಿಕೊಡುವುದಾಗಿ ಹೇಳಿ ಫಾತೀಮಾ ಅವರಿಂದ ಒಂದು ಲಕ್ಷ ರೂ. ನಗದು ಪಡೆದಿದ್ದಾನೆ. ಕೆಲ ದಿನಗಳ ಬಳಿಕ ವೈಯಕ್ತಿಕ ಸಮಸ್ಯೆಗಳ ಪರಿಹಾರಕ್ಕಾಗಿ ಏಳು ಲಕ್ಷ ರೂ. ಹಣ ಬೇಕಾಗಿದೆ. ನೀವು ಸರ್ಕಾರಿ ನೌಕರರಾಗಿರುವುದರಿಂದ ಬ್ಯಾಂಕ್‌ನಿಂದ ಸಾಲ ಮಾಡಿಸಿಕೊಟ್ಟರೆ, ನಾನು ಇಎಂಐ ಪಾವತಿಸಿಕೊಂಡು ಸಾಲ ತೀರಿಸುತ್ತೇನೆ ಎಂದು ಹೇಳಿದ್ದಾನೆ. ಈತನ ಮಾತು ನಂಬಿದ ಫಾತೀಮಾ ಅವರು ತಮ್ಮ ಸಂಬಳದ ಬ್ಯಾಂಕ್ ಖಾತೆಯಿಂದ ಏಳು ಲಕ್ಷ ರೂ. ಸಾಲ ಪಡೆದು ಆ ಹಣವನ್ನು ಆರೋಪಿಗೆ ನೀಡಿದ್ದಾರೆ.

1 ಇಎಂಐ ಪಾವತಿಸಿ ಕೈಕೊಟ್ಟ:
ಸಾಲದ ಪಡೆದ ನಂತರ ಮೊದಲ ಇಎಂಐ ಪಾವತಿಸಿರುವ ನೂರ್ ಮೊಹಮದ್ ಬಳಿಕ ಇಎಂಐ ಪಾವತಿಸಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದಾಗ, ನಾನು ಇಎಂಐ ಪಾವತಿಸುವುದಿಲ್ಲ. ಸದ್ಯಕ್ಕೆ ಸಾಲದ ಹಣ ವಾಪಾಸ್ ನೀಡುವುದಿಲ್ಲ ಎಂದಿದ್ದಾನೆ ಎಂದು ಫಾತೀಮಾ ದೂರಿನಲ್ಲಿ ಆರೋಪಿಸಿದ್ದಾರೆ.
ನನ್ನ ವೈಯಕ್ತಿಕ ಸಮಸ್ಯೆಗಳನ್ನು ಬಂಡಾವಾಳ ಮಾಡಿಕೊಂಡು ಒಟ್ಟು ೮ ಲಕ್ಷ ರೂ. ಪಡೆದು ವಂಚಿಸಿರುವ ನೂರ್ ಮೊಹಮದ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.