ಜಿಲ್ಲೆ

ನಕಲಿ ಚಿನ್ನ ನೀಡಿ ವಂಚಿಸಿದ್ದ ಆರೋಪಿ ಸೆರೆ

ಬೀರೂರು: ನಕಲಿ ಚಿನ್ನ ನೀಡಿ ಎರಡು ಲಕ್ಷ ರೂ. ವಂಚಿಸಿದ ವ್ಯಕ್ತಿಯನ್ನು ಬೀರೂರು ಪೊಲೀಸರು ಬಂಧಿಸಿ ಬಂಧಿತನಿಂದ ಎರಡು ಲಕ್ಷ ರೂ.ಹಣವನ್ನು ವಶಪಡಿಸಿಕೊಂಡಿದ್ದಾರೆ.
ತಮಿಳುನಾಡು ರಾಜ್ಯದ ಮಧುರೈ ನಿವಾಸಿ ರವಿ ಬಂಧಿತ ಆರೋಪಿ. ಕರ್ನಾಟಕ ಮೂಲದ ವೆಂಕಟೇಶನ್ ಎಂಬಾತನಿಗೆ ನಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಹಲವಾರು ಚಿನ್ನದ ನಾಣ್ಯಗಳು ಸಿಕ್ಕಿದ್ದು, ಅವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತೇನೆ ಎಂದು ನಂಬಿಸಿ ಜುಲೈ 7 ರಂದು ಬೀರೂರಿಗೆ ಕರೆಸಿಕೊಂಡು ಸ್ಯಾಂಪಲ್‌ಗಾಗಿ ಒಂದು ಅಸಲಿ ಚಿನ್ನದ ನಾಣ್ಯವನ್ನು ನೀಡಿದ್ದನು.
ವೆಂಕಟೇಶನ್ ಅದನ್ನು ಪರಿಶೀಲಿಸಿ ಅಸಲಿ ಎಂದು ತಿಳಿದು ಉಳಿದ ನಾಣ್ಯಗಳನ್ನು ಕಡಿಮೆ ಬೆಲೆಗೆ ಕೊಂಡುಕೊಳ್ಳಲು ಮುಂದಾಗಿದ್ದಾನೆ. ಗುರುವಾರ ತನ್ನ ಸ್ನೇಹಿತರ ಬಳಿ ಸಾಲ ಮಾಡಿ 2 ಲಕ್ಷ ರೂ.ಹಣ ಹೊಂದಿಸಿಕೊಂಡು ರವಿಯನ್ನು ಬೀರೂರಿಗೆ ಕರೆಸಿ ಆತನಿಂದ 200 ಗ್ರಾಂ ನಷ್ಟು ನಕಲಿ ಚಿನ್ನದನಾಣ್ಯ ಪಡೆದು 2 ಲಕ್ಷ ಹಣ ರೂ.ನೀಡಿದ್ದಾನೆ. ನಂತರ ಅವುಗಳನ್ನು ಪರಿಶೀಲಿಸಿದಾಗ ಅವುಗಳು ನಕಲಿ ಎಂಬುದು ತಿಳಿದಿದೆ. ವೆಂಕಟೇಶನ್ ಶುಕ್ರವಾರ ಬೀರೂರು ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ.
ಕೂಡಲೇ ಕಾರ್ಯ ಪ್ರವೃತ್ತರಾದ ಬೀರೂರು ಪೊಲೀಸರು ಆರೋಪಿಯ ಜಾಡು ಹಿಡಿದು ಚನ್ನಗಿರಿ ತಾಲೂಕಿನ ಹಲಕನಹಾಳ್‌ನ ಮನೆಯೊಂದರಲ್ಲಿ ಇದ್ದ ಆರೋಪಿ ರವಿಯನ್ನು ಬಂಧಿಸಿ ಮನೆಯಲ್ಲಿ ಬಚ್ಚಿಟ್ಟಿದ್ದ ಎರಡು ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.
ಎಸ್‌ಪಿ ವಿಕ್ರಂ ಅಮಟೆ ಮಾರ್ಗದರ್ಶನದಲ್ಲಿ ಎಎಸ್‌ಪಿ ಕೃಷ್ಣಮೂರ್ತಿ, ತರೀಕೆರೆ ಉಪ ಅಧೀಕ್ಷಕ ವಿ.ಎಸ್.ಹಾಲಮೂರ್ತಿ, ಬೀರೂರು ಸಿಪಿಐ ಶ್ರೀಕಾಂತ್, ಪಿಎಸ್‌ಐ ಸಜಿತ್ ಕುಮಾರ್, ಕಾನ್‌ಸ್ಟೇಬಲ್ ಡಿ.ವಿ.ಹೇಮಂತ್ ಕುಮಾರ್ ,ಬಿ.ಎಚ್.ರಾಜಪ್ಪ, ಕೆ.ದುರುಗಪ್ಪ ಕಾರ್ಯಚರಣೆಯಲ್ಲಿದ್ದರು.