ಕುಂದಾಪುರ: 17ರ ಹರೆಯದ ಅಪ್ರಾಪ್ತೆಯನ್ನು ಪುಸಲಾಯಿಸಿ ಅಪಹರಿಸಿ ಲೈಂಗಿಕ ಸಂಪರ್ಕ ಹೊಂದಿದ್ದಲ್ಲದೆ ಕೊನೆಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಆರೋಪಿ ಉಪ್ಪುಂದ ಗ್ರಾಮದ ಕೋಣದಮನೆ ನಿವಾಸಿ ನವೀನ್ ಯಾನೆ ಸಚಿನ್ ಖಾರ್ವಿ(25) ಎಂಬಾತನನ್ನು ಬೈಂದೂರು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಆರೋಪಿ ನವೀನ್ ಅಪ್ರಾಪ್ತೆಯನ್ನು ಪ್ರೀತಿಸುವ ನಾಟಕವಾಡಿ ಸಲುಗೆ ಬೆಳೆಸಿಕೊಂಡಿದ್ದನು. ಬಳಿಕ ಉಪ್ಪುಂದ ಶಂಕರ ಕಲಾ ಮಂದಿರದ ಬಳಿ ಹಾಡಿಯಲ್ಲಿ ನಾಗದೇವರ ಬನದ ಶೆಡ್‌ನಲ್ಲಿ ಜತೆ ಸೇರುತ್ತಿದ್ದರೆನ್ನಲಾಗಿದೆ. ಆ.18ರಂದು ರಾತ್ರಿ 8 ಗಂಟೆ ಸುಮಾರಿಗೆ ಬಾಲಕಿಯ ತಾಯಿ ಅಡುಗೆ ಮನೆಯಲ್ಲಿದ್ದ ಸಂದರ್ಭ ಮನೆಗೆ ಬಂದ ಆರೋಪಿ ನವೀನ್ ಯಾನೆ ಸಚಿನ್ ಬಾಲಕಿಯ ಕೈ ಹಿಡಿದು ಎಳೆದು ಅಪಹರಿಸಿಕೊಂಡು ಹೋಗಿದ್ದು, ಲೈಂಗಿಕ ಕಿರುಕುಳ ನೀಡಿ ಬಳಿಕ ಜಿರಲೆಗೆ ಹಾಕುವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಇದೀಗ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡ ತಕ್ಷಣ ಬೈಂದೂರು ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.