ಜಿಲ್ಲೆ

ಇಪ್ಪತ್ತು ಠಾಣೆಗಳಿಗೆ ಮೋಸ್ಟ್ ವಾಂಟೆಡ್ ಆರೋಪಿ!

ಚಿತ್ರದುರ್ಗ: ದರೋಡೆ ಹಾಗೂ ಅಪಹರಣ ಪ್ರಕರಣಗಳ ಮೂಲಕ ಚಿತ್ರದುರ್ಗದ ನಿದ್ದೆಗೆಡಿಸಿದ್ದ ಆರೋಪಿ ಸಮ್ಮು ಅಲಿಯಾಸ್ ಬಷೀರ್ ಸಾಬ್ 20 ಪ್ರಕರಣಗಳಲ್ಲಿ ಮೋಸ್ಟ್ ವಾಂಟೆಡ್ ಆಗಿದ್ದಾನೆ.

ಬೆಂಗಳೂರು, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳ 20 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಕಳವು, ದರೋಡೆ, ಸುಲಿಗೆ ಪ್ರಕರಣಗಳಲ್ಲಿ ಬೆಂಗಳೂರು ಮೂಲದ ಈತ ಭಾಗಿಯಾಗಿದ್ದನು.

ವೃತ್ತಿಯಲ್ಲಿ ಚಾಲಕನಾಗಿರುವ ಸಮ್ಮು ಮೇಲೆ ವಿವಿಧ ಠಾಣೆಗಳಲ್ಲಿ ಜಾಮೀನುರಹಿತ ಬಂಧನದ ವಾರೆಂಟ್‌ಗಳಿವೆ.

ಸಮ್ಮು, ಬಿಹಾರ ಮೂಲದ ಮಹಮದ್ ಆಲಂ ಸಾಕೀಬ್ ಸೇರಿ ಮೂವರು ಜು.8 ರಂದು ಚಿತ್ರದುರ್ಗದ ಬ್ಯಾಂಕ್ ಕಾಲನಿಯ ಮನೆಯೊಂದಕ್ಕೆ ನುಗ್ಗಿ ದರೋಡೆ ಮಾಡುವ ಜತೆಗೆ ಆ ಮನೆಯ ಇಬ್ಬರನ್ನು ಅಪಹರಿಸಿದ್ದರು.

ಪ್ರಕರಣ ನಡೆದ ಎರಡು -ಮೂರು ದಿನಗಳಲ್ಲೇ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಬಂಧಿತರ ಕುರಿತು ರಾಜ್ಯದ ಇತರೆ ಠಾಣೆಗಳಿಗೆ ಚಿತ್ರದುರ್ಗ ಪೊಲೀಸರು ಮಾಹಿತಿ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಬೆಂಗಳೂರು ಕೆ.ಆರ್.ಪುರಂ ಪೊಲೀಸರು, ಜು.24 ರಂದು ಇವರನ್ನು ಬೆಂಗಳೂರಿಗೆ ಕರೆದೊಯ್ದು ವಿಚಾರಣೆ ನಡೆಸಿ ಜು.28ರ ಶುಕ್ರವಾರ ವಾಪಸ್ ಕರೆತಂದಿದ್ದಾರೆ.

ಅಪರಾಧ ಕೃತ್ಯ ಎಸಗುವ ಮೊದಲು ಪದೇ ಪದೆ ಸಹಚರರನ್ನು ಬದಲಾಯಿಸುತ್ತಿದ್ದ ಸಮ್ಮು, ಈಚೆಗೆ ಬೆಂಗಳೂರು ಸಮೀಪದ ಪುಟ್ಟೇನಹಳ್ಳಿ ಮನೆಯೊಂದರಲ್ಲಿ ನಗ, ನಗದು, ಕಾರು ಕಳವು ಮಾಡಿದ್ದನು.

ಕದ್ದ ಕಾರಿಗೆ ನಕಲಿ ನಂಬರ್ ಹಾಕಿಕೊಂಡು ಚಿತ್ರದುರ್ಗ ಜಿಲ್ಲೆಯ ಹಲವೆಡೆ ಕಳವು, ದರೋಡೆ ನಡೆಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಪಿಸ್ತೂಲ್ ಮಾಹಿತಿ ಸಿಕ್ಕಿಲ್ಲ
ಈತ ಈ ಹಿಂದೆ ಕೊಲ್ಕತ್ತಾದಲ್ಲಿ ಖರೀದಿಸಿದ್ದ ಪಿಸ್ತೂಲ್ ಅನ್ನು ಬಾಣಸವಾಡಿ ಪೊಲೀಸರು ವಶ ಪಡಿಸಿಕೊಂಡಿದ್ದರು.

ಆದರೆ ದುರ್ಗದ ಬ್ಯಾಂಕ್ ಕಾಲನಿಯಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಬಳಸಿದ ಪಿಸ್ತೂಲ್ ಯಾವುದು ಎಂದು ಸ್ಥಳೀಯ ಪೊಲೀಸರು ಮಾಹಿತಿ ಹುಡುಕುತ್ತಿದ್ದಾರೆ.

ಯಾವ್ಯಾವ ಠಾಣೆಗಳಲ್ಲಿ ಜಾಮೀನು ರಹಿತ ವಾರೆಂಟ್?
ಬೆಂಗಳೂರಿನ ಬಾಗಲೂರು, ಬಾಣಸವಾಡಿ, ಕಮರ್ಷಿಯಲ್ ಸ್ಟ್ರೀಟ್, ಹೆಬ್ಬಾಳ, ಹಲಸೂರು, ಜಯನಗರ, ಕಾಡುಗೋಡಿ, ಉಪ್ಪಾರಪೇಟೆ, ಪುಟ್ಟೇನಹಳ್ಳಿ, ಸದಾಶಿವನಗರ, ಕೆ.ಆರ್.ಪುರಂ ಠಾಣೆ, ಚಿಕ್ಕಮಗಳೂರು ನಗರ, ಶಿವಮೊಗ್ಗದ ಜಯನಗರ ಠಾಣೆಗಳಲ್ಲಿ ಸಮ್ಮುವಿನ ಮೇಲೆ ಜಾಮೀನು ರಹಿತ ವಾರೆಂಟ್ ಪ್ರಕರಣಗಳಿವೆ.

ಆರೋಪಿ ಸಮ್ಮು ರಾಜ್ಯದ ವಿವಿಧ ಠಾಣೆಗಳ ಪೊಲೀಸರಿಗೆ ಬೇಕಾಗಿದ್ದಾನೆ. ದುರ್ಗದ ಜೈಲಿನಲ್ಲಿರುವ ಮೂವರು ಆರೋಪಿಗಳ ಐಡೆಂಟಿಫಿಕೇಷನ್ ಪರೇಡ್ ಸದ್ಯದಲ್ಲೇ ನಡೆಯಲಿದೆ. ಚಿತ್ರದುರ್ಗದಲ್ಲಿ 120 ಗ್ರಾಂ ಚಿನ್ನಾಭರಣ ದೋಚಿ ಇಬ್ಬರನ್ನು ಅಪಹರಿಸಿ 50 ಲಕ್ಷ ರೂ. ಸುಲಿಗೆ ಮಾಡುವ ಮುನ್ನ ಮೂವರು ಹಿರಿಯೂರಿನಲ್ಲಿ ಕೂಡ ಲಕ್ಷಾಂತರ ರೂ. ಮೌಲ್ಯದ ನಗ, ನಗದು ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದರು. ಹಿರಿಯೂರು ಪೊಲೀಸರು ಮೂವರನ್ನೂ ವಶಕ್ಕೆ ಪಡೆದು ತನಿಖೆ ನಡೆಸಲಿದ್ದಾರೆ.ಕೆ.ಪರಶುರಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಿತ್ರದುರ್ಗ