ಶಿವಮೊಗ್ಗ: ದರೋಡೆ ಪ್ರಕರಣ ಸಂಬಂಧ ಬಂಧಿಸಲು ತೆರಳಿದ ಪೊಲೀಸರ ಮೇಲೆ ಚಾಕು ಇರಿದು ಹಲ್ಲೆ ನಡೆಸಿದ್ದ ಆರೋಪಿ ಕಾಲಿಗೆ ಪೊಲೀಸರು ಗುಂಡು ಹೊಡೆದಿರುವ ಘಟನೆ ನಡೆದಿದೆ.
ಇಂದು ಬೆಳಗ್ಗೆ ದೊಡ್ಡಪೇಟೆ ಪೊಲೀಸ್ ಕಾನ್ಸ್‌ಸ್ಟೇಬಲ್ ಗುರುನಾಯ್ಕ ಮೇಲೆ ದಾಳಿ ಮಾಡಿರುವ ಆರೋಪಿ ಶಾಹಿದ್ ಖುರೇಷಿಯನ್ನು ಬಂಧಿಸಲು ಹೋದಾಗ ಆತ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಕೋಟೆ ಠಾಣೆ ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ.
ಬೆಳಗ್ಗೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸ್ ಕಾನ್ಸ್ಟೇಬಲ್ಗಳಾದ ಗುರುನಾಯ್ಕ ಹಾಗೂ ರಮೇಶ್ ಆರೋಪಿ ಸಾಹೀದ್ ಖುರೇಷಿಯನ್ನು ಬಂಧಿಸಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ನಗರದ ಕ್ಲಾರ್ಕ್ ಪೇಟೆ ಬಳಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಗುರುನಾಯ್ಕ ಎನ್ನುವ ಸಿಬ್ಬಂದಿಯ ಎದೆಗೆ ಚಾಕು ಇರಿದು ಆರೋಪಿ ಪರಾರಿಯಾಗಿದ್ದ.
ಪ್ರಕರಣ ದಾಖಲಿಸಿಕೊಂಡು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದ ಪೊಲೀಸರು ಕೆಲವೇ ಗಂಟೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗೆ ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.