ಸಾಂದರ್ಭಿಕ ಚಿತ್ರ  
ಜಿಲ್ಲೆ

5 ಲಕ್ಷ ರೂ. ಮೌಲ್ಯದ ಕಾರು, 18 ಸಾವಿರ ರೂ. ಗಾಂಜಾ ಸಹಿತ ಆರೋಪಿ ಬಂಧನ

ಮಂಗಳೂರು: ಕೋಡಿಕಲ್ 4ನೇ ಕ್ರಾಸ್ ನಿಂದ ಫಲ್ಗುಣಿ ನದಿ ಬಳಿ ಮಾದಕ ವಸ್ತು ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಉರ್ವ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದೇರೆಬೈಲ್ ಕೊಂಚಾಡಿಯ ಅನುದೀಪ್. ಎನ್ (22) ಬಂಧಿತ ಆರೋಪಿ. ಆತನಿಂದ 18,000 ರೂ. ಮೌಲ್ಯದ 351 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಠಾಣೆಯಲ್ಲಿ ಶಿವಾನಂದ ಎಂಬಾತನ ವಿರುದ್ಧ ಎನ್ ಡಿಪಿಎಸ್ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣದಲ್ಲಿ ಅನುದೀಪ್ ಆತನಿಗೆ ಗಾಂಜಾ ನೀಡಿರುವ ಬಗ್ಗೆ ತಿಳಿದು ಬಂದಿತ್ತು. ಅದರಂತೆ ಜೂ.25ರಂದು ಅನುದೀಪ್ ಕೋಡಿಕಲ್ ಫಲ್ಗುಣಿ ನಗರಕ್ಕೆ ಬರುವ ಮಾಹಿತಿ ಲಭ್ಯವಾಗಿದ್ದು, ಮಹಾನಗರ ಪಾಲಿಕೆಯ ಡ್ರೈನೇಜ್ ಪಂಪ್ ಹೌಸ್ ಗಿಂತ ಹಿಂದೆ ರಸ್ತೆಯ ಬದಿಯಲ್ಲಿ ಖಾಲಿ ಸೈಟ್ ಜಾಗದಲ್ಲಿದ್ದ ಆತನನ್ನು ಬಂಧಿಸಲಾಗಿದೆ. ವಿಚಾರಿಸಿದಾಗ ಗಾಂಜಾವನ್ನು ಹೆಚ್ಚಿನ ಹಣಕ್ಕೆ ಮಾರಾಟಕ್ಕಾಗಿ ಬಂದಿರುವುದಾಗಿ ತಿಳಿಸಿದ್ದಾನೆ.
ಆತ ಬಂದಿದ್ದ ಕಾರಿನ ಹಿಂಭಾಗದ ಸೀಟ್ ನಲ್ಲಿ 18 ಸಾವಿರ ರೂ. ಮೌಲ್ಯದ 351 ಗ್ರಾಂ ಗಾಂಜಾ ಪತ್ತೆಯಾಗಿದೆ. ಜತೆಗೆ ಆತನಿಂದ 15 ಸಾವಿರ ರೂ. ಮೌಲ್ಯದ ಮೊಬೈಲ್, 5 ಲಕ್ಷ ರೂ. ಮೌಲ್ಯದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ವಿರುದ್ಧ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.