ಮಡಿಕೇರಿ: ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ವಿವಿಧ ಕಳವು ಪ್ರಕರಣದಲ್ಲಿ ಕೈಚಳಕ ತೋರಿಸಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚುವಲ್ಲಿ ಕುಟ್ಟ ವೃತ್ತದ ಅಧಿಕಾರಿ ಹಾಗೂ ಸಿಬ್ಬಂಧಿಗಳು ಯಶಸ್ವಿಯಾಗಿದ್ದಾರೆ.
ಸಿದ್ದಾಪುರ ಮೂಲದ ೩೦ ವರ್ಷ ವಯಸ್ಸಿನ ಆರೋಪಿಯನ್ನು ದಸ್ತಗಿರಿ ಮಾಡಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಆರೋಪಿಯು ಈ ಹಿಂದೆ ೨ ಸುಲಿಗೆ, ೧ ದೇವಸ್ಥಾನದ ವಿಗ್ರಹ ನಾಶ, ದೇವಸ್ಥಾನದ ಹುಂಡಿ ಕಳವು ಹಾಗೂ ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಒಂದು ದೇವಸ್ಥಾನದ ಕಳವು ಪ್ರಕರಣವನ್ನು ಪತ್ತೆಹಚ್ಚಿದ್ದಾರೆ. ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ೪ ಹಾಗೂ ಸೋಮವಾರಪೇಟೆ ಠಾಣಾ ವ್ಯಾಪ್ತಿಯ ೧ ದೇವಸ್ಥಾನ ಕಳವು ಪ್ರಕರಣಗಳು ಪತ್ತೆಯಾಗಿರುತ್ತವೆ.
ಪ್ರಕರಣಗಳು: ನಾಲ್ಕೇರಿ ಗ್ರಾಮದ ಸುಳ್ಳಿಮಾಡ ಗೋಪಾಲ ತಿಮ್ಮಯ್ಯರವರಿಗೆ ಹಲ್ಲೆ ಮಾಡಿ ಸುಲಿಗೆ ಮಾಡಲು ಪ್ರಯತ್ನಿಸಿದ ಪ್ರಕರಣ. ಕೋತೂರು ಗ್ರಾಮದ ಗಂಗಮ್ಮರವರ ಕಿವಿಯ ಓಲೆ ಕಿತ್ತುಕೊಂಡು ಹೋದ ಸುಲಿಗೆ ಪ್ರಕರಣ. ಕೋತೂರು ಗ್ರಾಮದ ವನದೇವತೆ ದೇವಾಲಯದ ಗಣೇಶ ವಿಗ್ರಹಗಳನ್ನು ಭಗ್ನ ಮಾಡಿದ ಪ್ರಕರಣ. ಕೋತೂರು ಗ್ರಾಮದ ಮಹದೇಶ್ವರ ದೇವಾಲಯದ ಹುಂಡಿ ಕಳವು ಪ್ರಕರಣ. ಸೋಮವಾರಪೇಟೆ ಬರೆಗುಂಡಿ ಗ್ರಾಮದ ಅಯ್ಯಪ್ಪ ದೇವಸ್ಥಾನದ ಹುಂಡಿ ಕಳವು ಪ್ರಕರಣ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕ ಕ್ಷಮ ಮಿಶ್ರಾರವರ ನಿರ್ದೇಶನದಂತ ವಿರಾಜಪೇಟೆ ಪೊಲೀಸ್ ಉಪ ಅಧೀಕ್ಷರಾದ ಸಿ.ಟಿ.ಜಯಕುಮಾರ್‌ರವರ ಮಾರ್ಗದರ್ಶನದಲ್ಲಿ ಕುಟ್ಟ ವೃತ್ತದ ವೃತ್ತ ನಿರೀಕ್ಷಕ ಸಿ.ಎ.ಮಂಜಪ್ಪ, ಗೋಣಿಕೊಪ್ಪ ವೃತ್ತ ನಿರೀಕ್ಷಕ ಜಯರಾಮ್, ವಿರಾಜಪೇಟೆ ವೃತ್ತದ ವೃತ್ತ ನಿರೀಕ್ಷಕ ಬಿ.ಎಸ್.ಶ್ರೀಧರ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂಧಿ ನಿಯೋಜಿಸಿ ೪ ಪತ್ತೆ ತಂಡವನ್ನು ರಚಿಸಲಾಗಿತ್ತು. ಕಳೆದ ಒಂದು ವಾರದಿಂದ ರಾತ್ರಿ ಹಗಲು ಎನ್ನದೇ ಪತ್ತೆ ಕಾರ್ಯದಲ್ಲಿ ತೊಡಗಿದ್ದರು. ಬೆಂಗಳೂರು, ಮೈಸೂರು, ಮಂಡ್ಯ, ಹಾಸನ, ಮಾನಂದವಾಡಿ ಕಡೆಗಳಿಗೆ ತೆರಳಿದ ತಂಡದ ಸಿಬ್ಬಂದಿಗಳು ಪ್ರಾಯ ೩೦ ವರ್ಷದ ಸಿದ್ದಾಪುರ ಮೂಲದ ಅರೋಪಿಯನ್ನು ಪತ್ತೆ ಮಾಡಿ ವಶಕ್ಕೆ ಪಡೆದುಕೊಂಡು ದಸ್ತಗಿರಿ ಮಾಡಿದ್ದಾರೆ.
ಆರೋಪಿ ಪತ್ತೆಗೆ ಶ್ರಮಿಸಿದ ತಂಡದಲ್ಲಿ ರುಟ್ಟ ಠಾಣಾ ಪಿ.ಎಸ್.ಐ ಚಂದ್ರಪ್ಪ, ಶ್ರೀಮಂಗಲ ಠಾಣೆಯ ಪಿ.ಎಸ್.ಐ ರವಿಶಂಕರ್, ವಿರಾಜಪೇಟೆ ನಗರ ಠಾಣೆಯ ಪಿ.ಎಸ್.ಐ ಜಗದೀಶ ದೂಳಶೆಟ್ಟಿ, ಎ.ಎಸ್.ಐ ಪಾನ್ಸಿಸ್, ಚಂದ್ರು, ಸಣ್ಣಪ್ಪ ಸೇರಿದಂತೆ ಇತರ ಸಿಬ್ಬಂದಿಗಳು ಭಾಗವಹಿಸಿದ್ದರು. ಪ್ರಕರಣದಲ್ಲಿ ಆರೋಪಿತರನ್ನು ಶೀಘ್ರವಾಗಿ ಬಂಧಿಸಿ ಪ್ರಕರಣವನ್ನು ಭೇದಿಸಿದ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿ ನಗದು ಬಹುಮಾನ ಘೋಷಿಸಿದ್ದಾರೆ.