ಜಿಲ್ಲೆ

ನೌಕರಿ ಕೊಡಿಸುವುದಾಗಿ ವಂಚಿಸುತ್ತಿದ್ದ ವಿಜಯಪುರದ ಆರೋಪಿ ಬಂಧನ

ಹುಬ್ಬಳ್ಳಿ: ನೌಕರಿ ಕೊಡಿಸುವುದಾಗಿ ನಂಬಿಸಿ ಅನೇಕ ಅಮಾಯಕರಿಗೆ ಮಕ್ಮಲ್ ಟೋಪಿ ಹಾಕಿದ್ದ ಆರೋಪಿಯನ್ನು ಬಂಧಿಸುವಲ್ಲಿ ಇಲ್ಲಿನ ಕಸಬಾಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ವಿಜಯಪುರ ಜಿಲ್ಲೆಯ ಪ್ರಶಾಂತ ದೇಶಪಾಂಡೆ (38) ಎನ್ನುವಾತ ಇಲ್ಲಿನ ನೇಕಾರನಗರದ ನಿವಾಸಿಯೊಬ್ಬರನ್ನು ಪರಿಚಯಿಸಿಕೊಂಡಿದ್ದ. ರೈಲ್ವೆ ಇಲಾಖೆಯಲ್ಲಿ ನನಗೆ ಉನ್ನತ ಮಟ್ಟದ ಅಧಿಕಾರಿಗಳ ಪರಿಚಯವಿದೆ ಎಂದು ಹೇಳಿಕೊಂಡಿದ್ದ. ಅನೇಕ ಜನರಿಗೆ ನೌಕರಿ ಕೊಡಿಸಿರುವುದಾಗಿ ಸುಳ್ಳು ನೇಮಕಾತಿ ಪತ್ರ ಹಾಗೂ ಜಾಯಿನಿಂಗ್ ಲೆಟರ್ ತೋರಿಸಿದ್ದ. ಹೀಗೆ ನಂಬಿಸಿ 31.14 ಲಕ್ಷ ರೂ. ಹಣ ಪಡೆದು ವಂಚಿಸಿದ್ದ. ಈ ಕುರಿತು ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸ್ ಇನ್​ಸ್ಪೆಕ್ಟರ್ ರಾಘವೇಂದ್ರ ಹಳ್ಳೂರ ನೇತೃತ್ವದ ವಿಶೇಷ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪತ್ತೆ ಹಚ್ಚಿದ್ದು, ನ್ಯಾಯಾಲಯಕ್ಕೆ ಒಪ್ಪಿಸಿದೆ. ಈ ಆರೋಪಿಯ ಮೇಲೆ ಶಿವಮೊಗ್ಗ ರಿಪ್ಪನ್ ಪೇಟೆ ಪೊಲೀಸ್ ಠಾಣೆ, ಬಾಗಲಕೋಟೆ ನವನಗರ ಠಾಣೆ ಸೇರಿ ರಾಜ್ಯದ ಅನೇಕ ಕಡೆ ವಂಚನೆ ಪ್ರಕರಣಗಳು ದಾಖಲಾಗಿವೆ ಎಂದು ಹು-ಧಾ ಪೊಲೀಸ್ ಆಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.