ಜಿಲ್ಲೆ

ಕಾನ್‌ಸ್ಟೆಬಲ್ ಮೇಲೆ ಹಲ್ಲೆ ಮಾಡಿದ್ದ ಆರೋಪಿ ಬಂಧನ

ಆರ್.ಕೃಷ್ಣ

ಮೈಸೂರು: ಬಂಧನದ ವಾರಂಟ್ ಮೇಲೆ ವಶಕ್ಕೆ ಪಡೆಯಲು ಮುಂದಾದ ಕಾನ್‌ಸ್ಟೆಬಲ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ಆರೋಪಿಯನ್ನು ಬೆನ್ನಟ್ಟಿ ಬಂಧಿಸಲಾಗಿದೆ.

ತಿ.ನರಸೀಪುರ ಪೊಲೀಸ್ ಠಾಣೆಯ ಮುಖ್ಯಪೇದೆ ಮಂಜುನಾಥ್ ಹಲ್ಲೆಗೆ ಒಳಗಾದವರು. ಹೋಟೆಲ್ ಮಾಲೀಕ ವಿಜಯೇಂದ್ರ ಹಾಗೂ ಇವರ ಸಹೋದರ ರಾಘವೇಂದ್ರ ಆರೋಪಿಗಳು.

ಚೆಕ್ ಬೌನ್ಸ್ ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ತಿ.ನರಸೀಪುರ ನ್ಯಾಯಾಲಯದಲ್ಲಿ ವೇದಕುಮಾರ್ ಪ್ರಕರಣ ದಾಖಲಿಸಿದ್ದರು. ಆದರೆ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆ ಬಂಧನದ ಆದೇಶ ಹೊರಡಿಸಲಾಗಿತ್ತು.

ನ್ಯಾಯಾಲಯದ ವಾರಂಟ್ ಹಿಡಿದು ಮುಖ್ಯಪೇದೆ ಮಂಜುನಾಥ್ ಅವರು ನಜರ್‌ಬಾದ್‌ನ ಛತ್ರಿ ಮರದ ಬಳಿ ಇರುವ ಮೈಸೂರು ಹೋಟೆಲ್ ಕಾಂಪ್ಲೆಕ್ಸೃ್ ಬಳಿ ಕಾದಿದ್ದರು. ಆಗ ಬಂದ ವಿಜಯೇಂದ್ರ ಅವರು, ನಾನು ವಕೀಲರೊಂದಿಗೆ ಬರಲಿದ್ದು, ವಾರಂಟ್ ರೀಕಾಲ್ ಮಾಡಿಸುತ್ತೇನೆ ಎಂದು ಹೇಳಿದ್ದಾರೆ. ಬಳಿಕ ವಿಜಯೇಂದ್ರ, ಪೇದೆ ಮಂಜುನಾಥ್ ಕಾರಿನಲ್ಲಿ ಸಿದ್ದಾರ್ಥ ನಗರದ ಲಲಿತಮಹಲ್ ರಸ್ತೆಯಲ್ಲಿ ಹೋಗುವಾಗ ವಿಜಯೇಂದ್ರ ಕಾರಿನಿಂದ ಇಳಿದು ತಪ್ಪಿಸಿಕೊಳ್ಳಲು ಯತ್ನಿಸಿದರೆನ್ನಲಾಗಿದೆ. ವಿಜಯೇಂದ್ರನನ್ನು ಹಿಡಿದು ಪೇದೆ ಮಂಜುನಾಥ್, ನಜರ್‌ಬಾದ್ ಪೊಲೀಸರ ಸಹಕಾರ ಪಡೆಯಲು ಹೊಸ ಜಿಲ್ಲಾಧಿಕಾರಿ ಕಚೇರಿ ಬಳಿ ಕಾರಿನಲ್ಲಿಯೇ ಬಂದಾಗ, ವಿಜಯೇಂದ್ರ ಹಾಗೂ ಸಹಚರ ಲೋಕೇಶ್ ಅವರು ಮಂಜುನಾಥ್ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆಯನ್ನು ಕಂಡ ಡಿಸಿ ಕಚೇರಿ ಬಳಿ ಇದ್ದ ಪೊಲೀಸ್ ಸಿಬ್ಬಂದಿ, ಹಲ್ಲೆ ನಡೆಸಿದವರನ್ನು ಠಾಣೆಗೆ ಒಪ್ಪಿಸಿದ್ದಾರೆ.

ನಜರ್‌ಬಾದ್ ಠಾಣೆಯಲ್ಲಿ ವಿಜಯೇಂದ್ರ, ಸಹಚರ ಲೋಕೇಶ್, ಕಾರಿನ ಚಾಲಕ ಭೀಮಯ್ಯ ವಿರುದ್ಧ ಪ್ರಕರಣ ದಾಖಲಾಗಿದೆ.