ವಿಜಯಪುರ ನಗರದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಾ. ಡಿ.ಜಿ. ಸಾಗರ್‌ಜಿ ಬಣ) ವಿಜಯಪುರ ಜಿಲ್ಲಾ ಶಾಖೆಯ ಪದಾಧಿಕಾರಿಗಳು ಬೃಹತ್ ಪ್ರತಿಭಟನೆ ನಡೆಸಿದರು. ಸಿದ್ದು ರಾಯಣ್ಣವರ, ವೈ.ಸಿ. ಮಯೂರ, ಮಹಾಂತೇಶ ಸಾಸಾಬಾಳ, ಶರಣು ಚಲವಾದಿ ಮತ್ತಿತರರಿದ್ದಾರೆ.  
ಜಿಲ್ಲೆ

ಡಾ.ಅಂಬೇಡ್ಕರ್ ಕುರಿತು ಅವಹೇಳನದ ಆರೋಪ, ಡಿಎಸ್‌ಎಸ್‌ನಿಂದ ಬೃಹತ್ ಪ್ರತಿಭಟನೆ

ವಿಜಯಪುರ: ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಗೃಹ ಸಚಿವ ಅಮಿತ್ ಷಾ ಅವರನ್ನು ಕೂಡಲೇ ಸಂಪುಟದಿಂದ ಕೈಬಿಡಲು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಾ. ಡಿ.ಜಿ. ಸಾಗರ್‌ಜಿ ಬಣ) ವಿಜಯಪುರ ಜಿಲ್ಲಾ ಶಾಖೆಯ ಪದಾಧಿಕಾರಿಗಳು ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕೂಡಲೇ ಸಂಪುಟದಿಂದ ಕೈಬಿಡಲು ಆಗ್ರಹಿಸಿ ಡಾ. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಡಳಿತ ಕಚೇರಿವರೆಗೆ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಸಮಿತಿ ಜಿಲ್ಲಾ ಸಂಚಾಲಕ ಸಿದ್ದು ರಾಯಣ್ಣವರ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಬಗ್ಗೆ ಹಗುರವಾಗಿ ಮತ್ತು ಅವಹೇಳನಕರಿಯಾಗಿ ಮಾತನಾಡಿರುವ ಘಟನೆ ಇಡೀ ಮಾನವ ಕುಲ ತಲೆತಗ್ಗಿಸುವಂಥದ್ದು. ಇದೊಂದು ದೇಶದ್ರೋಹಿ ಕೆಲಸ. ಈ ಘಟನೆಯನ್ನು ಉಗ್ರವಾಗಿ ಖಂಡಿಸುವುದಾಗಿ ತಿಳಿಸಿದರು.

ಡಿಎಸ್‌ಎಫ್ ಜಿಲ್ಲಾ ಸಂಚಾಲಕ ವೈ.ಸಿ. ಮಯೂರ ಮಾತನಾಡಿ, ಡಾ.ಬಾಬಾಸಾಬ ಅಂಬೇಡ್ಕರ್ ಅವರನ್ನು ಸ್ಮರಣೆ ಮಾಡುವುದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯ. ಆದರೆ, ಅಮಿತ್ ಷಾ ಅವರು ಅಂಬೇಡ್ಕರ್ ಹೆಸರು ಬಳಸುವುದು ಶೋಕಿಗಾಗಿ ಎಂದು ಹೇಳಿರುವುದು ಖಂಡನೀಯ. ಅಲ್ಲದೇ, ಅಂಬೇಡ್ಕರ್ ಅವರ ಹೆಸರು ಹೇಳುವ ಬದಲು ದೇವರ ಹೆಸರು ಹೇಳಿದ್ದರೆ ಏಳು ಜನ್ಮಕ್ಕೆ ಪುಣ್ಯಪ್ರಾಪ್ತಿಯಾಗುತ್ತಿತ್ತು ಎಂದು ಹೇಳಿರುವುದು ದೇಶ ವಿರೋಧಿ ಕೃತ್ಯವಾಗಿದೆ ಎಂದರು.

ಮುಖಂಡರಾದ ಮಹಾಂತೇಶ ಸಾಸಾಬಾಳ, ಶರಣು ಚಲವಾದಿ, ನೀಲಕಂಠ ಹೊಸಮನಿ, ಜೈಭೀಮ ಕೂಚಬಾಳ, ಮುತ್ತು ದೊಡಮನಿ, ಜೈಭೀಮ ತಳಕೇರಿ, ಅರುಣ ಗವಾರಿ, ಪ್ರಶಾಂತ ತೊರವಿ, ಪವನ ಮ್ಯಾಗಿನಕೇರಿ, ರಾಜು ತೊರವಿ, ಗೋಪಾಲ ಪೂಜಾರಿ, ದಶರಥ ಈಟಿ, ತಿಪ್ಪಣ್ಣ ಕುದರಿ, ದೇವೇಂದ್ರ ಭಾವಿಮನಿ, ರಾಘವೇಂದ್ರ ಗುಡಿಮನಿ, ಜಾರು ಗುಡಿಮನಿ, ಸಂತೋಷ ಗುನ್ನಾಪೂರ, ವಿಶ್ವನಾಥ ದೊಡಮನಿ ಮತ್ತಿತರರಿದ್ದರು.