ಜಿಲ್ಲೆ

ಅಕ್ಷರಜಾತ್ರೆಗೆ 29.65 ಕೋಟಿ ರೂ ವ್ಯಯ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾಹಿತಿ

ಮಂಡ್ಯ: ನಗರದ ಹೊರವಲಯದಲ್ಲಿ ಕಳೆದ ಡಿಸೆಂಬರ್‌ನಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 29,65,07,226 ರೂಗಳನ್ನು ವ್ಯಯಿಸಲಾಗಿದೆ. ಅಂತೆಯೇ 2,53,61,166 ರೂ ಉಳಿಕೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಲೆಕ್ಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಮ್ಮೇಳನಕ್ಕೆಂದು ರಾಜ್ಯಸರ್ಕಾರದಿಂದ 30 ಕೋಟಿ ರೂ, ಮಳಿಗೆಗಳು, ಪ್ರತಿನಿಧಿಗಳ ನೋಂದಣಿ ಶುಲ್ಕ, ಇತರೆ ದೇಣಿಗೆಯಿಂದ 1,20,54,176 ರೂ., ಸರ್ಕಾರಿ ನೌಕರರ ಒಂದು ದಿನದ ವೇತನ 1,54,35,782 ರೂ ಸೇರಿ 32,74,89,958 ರೂ ಸಂಗ್ರಹವಾಗಿತ್ತು. ಈ ಪೈಕಿ 29,65,07,226 ರೂ ಸಮ್ಮೇಳನಕ್ಕೆ ಖರ್ಚು ಮಾಡಲಾಗಿದೆ ಎಂದರು.

ಲೆಕ್ಕಗಳೆಲ್ಲವೂ ಪಾರದರ್ಶಕವಾಗಿದೆ. ಇದರಲ್ಲಿ ಮುಚ್ಚು ಮರೆ ಇಲ್ಲ. ಸಮ್ಮೇಳನವನ್ನು ಅಭೂತಪೂರ್ವವಾಗಿ ಯಶಸ್ವಿಗೊಳಿಸಿದ್ದರೂ ಲೆಕ್ಕ ನೀಡಲಿಲ್ಲ ಎಂದು ಕೆಲವರು ಟೀಕೆ ಮಾಡಿದ್ದಾರೆ. ಮಾರ್ಚ್ ತಿಂಗಳು ಹಣಕಾಸು ವರ್ಷವಾಗಿದ್ದರಿಂದ ಸಮ್ಮೇಳನದ ಖರ್ಚು-ವೆಚ್ಚ ಕೊಡಲು ಸಾಧ್ಯವಾಗಿರಲಿಲ್ಲ. ಟೀಕೆಯನ್ನು ಯಾವ ದುರುದ್ದೇಶದಿಂದ ಮಾಡಿದ್ದಾರೋ ಗೊತ್ತಿಲ್ಲ. ಅದು ನಮ್ಮನ್ನು ಎಚ್ಚರಿಸಲು ಮಾಡಿರಬಹುದು. ನಾವು ಎಷ್ಟೇ ಪಾರದರ್ಶಕವಾಗಿ ಮಾಡಿದರೂ ಪ್ರಜಾಪ್ರಭುತ್ವದಲ್ಲಿ ಟೀಕೆ-ಟಿಪ್ಪಣಿಗಳು ಸಹಜ. ಸಮ್ಮೇಳನದ ಯಶಸ್ಸಿಗಾಗಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಪಂ ಸಿಇಒ ಅವರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ಇಲಾಖೆಗಳ ಅಧಿಕಾರಿಗಳು ಹಗಲು-ರಾತ್ರಿ ಎನ್ನದೆ ಕೆಲಸ ಮಾಡಿದ್ದಾರೆ. ಸಮ್ಮೇಳನಾಧ್ಯಕ್ಷ ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ ಅವರೇ ನಾನು ಇದುವರೆಗೆ 20 ಸಮ್ಮೇಳನ ನೋಡಿದ್ದೇನೆ. ಇಂತಹ ಅಭೂತಪೂರ್ವ ಸಮ್ಮೇಳವನ್ನು ನೋಡಿರಲಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ವಿಪಕ್ಷಗಳ ನಾಯಕರೂ ಸಹ ಪಕ್ಷಾತೀತವಾಗಿ ಸಮ್ಮೇಳನವನ್ನು ಶ್ಲಾಘಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಟೀಕೆ ಸಾಮಾನ್ಯ. ತಪ್ಪು ಮಾಡಿದ್ದರೆ ನೋವಾಗುತ್ತದೆ. ಆದರೆ, ನಾವು ಬಹಳ ಯಶಸ್ವಿಗೊಳಿಸಿದ್ದೇವೆ. ಟೀಕೆಗಳನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಹಾವೇರಿಯಲ್ಲಿ ನಡೆದ 86ನೇ ಸಮ್ಮೇಳನದ ಬಾಕಿ ಹಣ 5 ಕೋಟಿ ರೂ.ಗಳನ್ನೂ ನಮ್ಮ ಸರ್ಕಾರವೇ ಬಿಡುಗಡೆ ಮಾಡಿದೆ. 87ನೇ ಸಮ್ಮೇಳನಕ್ಕೆ ವಿದೇಶ, ಹೊರ ರಾಜ್ಯ ಹಾಗೂ ಜಿಲ್ಲೆಯ ವಿವಿಧೆಡೆಯಿಂದ ಲಕ್ಷಾಂತರ ಕನ್ನಡ ಪ್ರೇಮಿಗಳು ಬಂದಿದ್ದರು. ಗೋಷ್ಠಿಗಳು, ಪೊಲೀಸ್ ಬ್ಯಾಂಡ್, ವಿದ್ಯುತ್ ದೀಪಾಲಂಕಾರ, ಬಸ್ ವ್ಯವಸ್ಥೆ, ಊಟದ ವ್ಯವಸ್ಥೆ ಸೇರಿದಂತೆ ಎಲ್ಲವನ್ನೂ 3 ದಿನಗಳು ಬಹಳ ಅಚ್ಚುಕಟ್ಟಾಗಿ ನೋಡಿಕೊಂಡು ಕನ್ನಡ ಹಬ್ಬದ ರೀತಿ ಆಚರಿಸಿದ್ದೇವೆ. ಸಮ್ಮೇಳನದ ಯಶಸ್ಸಿಗಾಗಿ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ 28 ಸಮಿತಿ ರಚಿಸಿ ಚುಂಚಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರ ಸಮ್ಮುಖದಲ್ಲೇ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಹಣದಲ್ಲಿ ವ್ಯತ್ಯಾಸವಾಗದಂತೆ ಎಚ್ಚರಿಕೆ ವಹಿಸಿ ಯಶಸ್ವಿಯಾಗಿ ಮಾಡಿದ್ದೇವೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಹಣಕಾಸಿನ ವಿಚಾರದಲ್ಲಿ ಗೊಂದಲವಾಗಬಾರದೆನ್ನುವ ಕಾರಣಕ್ಕೆ ಮೂರು ಹಂತದ ದೃಢೀಕರಣ ಕಡ್ಡಾಯಗೊಳಿಸಲಾಗಿತ್ತು. ಅದಕ್ಕೆ ತಕ್ಕಂತೆ ಪರಿಶೀಲನೆ ಮಾಡಲಾಗಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಮಂಡ್ಯ ಉಪ ವಿಭಾಗಾಧಿಕಾರಿ ಶಿವಮೂರ್ತಿ, ಜಿಲ್ಲಾ ಕಸಾಪ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ ಇದ್ದರು.

6 ಕೋಟಿ ರೂ ವೆಚ್ಚದಲ್ಲಿ ಭವನ

ಅಭೂತಪೂರ್ವ ಯಶಸ್ಸು ಕಂಡ ಸಮ್ಮೇಳನದ ನೆನಪಿಗೆ ಕನ್ನಡ ಭವನ ನಿರ್ಮಾಣ ಮಾಡಲಾಗುವುದು. ನುಡಿಜಾತ್ರೆಯಲ್ಲಿ ಉಳಿದಿರುವ ಹಣದ ಜತೆಗೆ ರಾಜ್ಯಸರ್ಕಾರದಿಂದ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿಸಿ ಭವನ ನಿರ್ಮಾಣ ಮಾಡಲಾಗುವುದು ಎಂದು ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಭವನ ನಿರ್ಮಾಣಕ್ಕೆ 3 ಸ್ಥಳ ಗುರುತಿಸಲಾಗಿದ್ದು, ಯಾವ ಸ್ಥಳ ಸೂಕ್ತ ಎಂಬ ಬಗ್ಗೆ ಚರ್ಚಿಸಿ ಸಮ್ಮೇಳನದ ಉಳಿಕೆ ಹಣವನ್ನು ಭವನ ನಿರ್ಮಿಸಲು ಉಪಯೋಗಿಸಿಕೊಳ್ಳಲು ಸರ್ಕಾರದ ಮಂಜೂರಾತಿ ಪಡೆಯಲಾಗುವುದು ಎಂದು ಹೇಳಿದರು.