ಬಾಗಲಕೋಟೆ ನಗರದ ಬಾಲಿಕಿಯರ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸ್ವಾತಕೋತ್ತರ, ಪದವಿ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಸ್ವಾಂತ್ರೊೃೀತ್ಸವ ಕನ್ನಡ ಪದ ಬಂಧ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಸಂಭ್ರಮದ ಕ್ಷಣ. 
ಜಿಲ್ಲೆ

ಸ್ಪಷ್ಟವಾದ ಗುರಿಯೊಂದಿಗೆ ಸಾಧನೆ ಮಾಡಿ

Vijayapura - Desk - Gurappa Lokuri

ಬಾಗಲಕೋಟೆ: ಎಪ್ಪತ್ತಾರನೇ ಸ್ವಾತಂತ್ರೊೃೀತ್ಸವ ಅಂಗವಾಗಿ ವಿಜಯವಾಣಿ, ದಿಗ್ವಿಜಯ ಸುದ್ದಿಮಾಧ್ಯಮ ನೇತೃತ್ವ ಹಾಗೂ ಮಾಧವ ಸೇವಾ ಕೇಂದ್ರ, ವೈಷ್ಣೋದೇವಿ ಕ್ರಿಯೇಷನ್ಸನ ಕೆಂಗುಲಾಬಿ ತಂಡ ಸಹಯೋಗದಲ್ಲಿ ಸೋಮವಾರ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸ್ನಾತಕೋತ್ತರ, ಪದವಿ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಸ್ವಾತಂತ್ರೊೃೀತ್ಸವ ಕನ್ನಡ ಪದಬಂಧ ಸ್ಪರ್ಧೆಗೆ ವಿದ್ಯಾರ್ಥಿಗಳಿಂದ ಭಾರಿ ಸ್ಪಂದನೆ ವ್ಯಕ್ತವಾಯಿತು.

ಜಿಲ್ಲೆಯ ಬಾಗಲಕೋಟೆ, ಮುಧೋಳ, ಜಮಖಂಡಿ, ತೇರದಾಳ, ಬೀಳಗಿ, ರಬಕವಿ-ಬನಹಟ್ಟಿ, ಬಾದಾಮಿ, ಗುಳೇದಗುಡ್ಡ, ಇಳಕಲ್ಲ, ಹುನಗುಂದ ಸೇರಿದಂತೆ ಗ್ರಾಮೀಣ ಹಾಗೂ ನಗರ ಪ್ರದೇಶದಿಂದ ಸ್ನಾತಕೋತ್ತರ, ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳ 300 ಕ್ಕೂ ಅಧಿಕ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.

ಬೆಳಗ್ಗೆ 11 ಗಂಟೆಗೆ ಆರಂಭವಾದ ಸ್ಪರ್ಧೆ 30 ನಿಮಿಷಗಳಲ್ಲಿ ಮುಕ್ತಾಯಗೊಂಡಿತು. ನಂತರ ಕಾಲೇಜಿನ ಪ್ರಾಧ್ಯಾಪಕರು ನಿರ್ಣಾಯಕರಾಗಿ ಕಾರ್ಯನಿರ್ವಹಿಸಿ, ಅತೀ ಹೆಚ್ಚು ಅಂಕ ಪಡೆದ 10 ವಿದ್ಯಾರ್ಥಿಗಳನ್ನು ವಿಜೇತರೆಂದು ಆಯ್ಕೆ ಮಾಡಿದರು.

ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಪದಬಂಧ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಾದ ಸುಶ್ಮೀತಾ ರಾಣೋಜಿ, ಜನಬಾಯಿ ಪವಾರ, ಸವಿತಾ ನಾಯಕ, ಅನ್ನಪೂರ್ಣ ಚಿಮ್ಮನಕಟ್ಟಿ, ವಿಜಯಲಕ್ಷ್ಮೀ ಶೆಟ್ಟಪ್ಪನವರ, ಬೋರಮ್ಮ ಚಂಗಳಿ, ರೇಷ್ಮಾ ಪಿಂಜಾರ, ಸಂಗೀತ ನ್ಯಾಮಗೊಂಡ, ಶಿವನೀಲಮ್ಮ ಪಾಟೀಲ, ಆಸ್ಮಾ ಮೋಮಿನ ಅವರಿಗೆ ನಗದು ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಿ ಅಭಿನಂದಿಸಿದರು.

ಜಿ.ಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಪ್ರಶಸ್ತಿ ವಿತರಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮೊಬೈಲ್ ಗೀಳು ಹೆಚ್ಚಾಗುತ್ತಿದೆ. ಇದು ವಿದ್ಯಾರ್ಥಿಗಳು ಭವಿಷ್ಯಕ್ಕೆ ಮಾರಕವಾಗಿದೆ. ಇಂತಹ ಸಂದರ್ಭದಲ್ಲಿ ಇಂದಿನ ಯುವಪೀಳಿಗೆಯಿಂದ ದೂರಸರಿದಿದ್ದ ಪದಬಂಧ ಸ್ಪರ್ಧೆಯನ್ನು ಆಯೋಜನೆ ಮಾಡುತ್ತಿರುವುದು ಸ್ವಾಗತಾರ್ಹ ಎಂದರು.

ಮಹಿಳೆಯರು ಅಪಾರ ಜ್ಞಾನ ಹೊಂದಿದ್ದಾರೆ. ವಿವಿಧ ಕ್ಷೇತ್ರಗಲ್ಲಿ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳು ಸ್ಪಷ್ಟವಾದ ಗುರಿಯೊಂದಿಗೆ ಹೆಜ್ಜೆ ಇಟ್ಟು ಸಾಧನೆ ಮಾಡಬೇಕು. ತಂದೆ-ತಾಯಿ, ಪೋಷಕರು ಹೆಮ್ಮೆ ಪಡುವಂತೆ ಬೆಳೆಯಬೇಕು. ಉನ್ನತ ಸ್ಥಾನ ಅಲಂಕರಿಸಬೇಕು. ಆರ್ಥಿಕ ಪರಿಸ್ಥಿತಿ ಏನೇ ಇದ್ದರೂ ಕಠಿಣ ಸವಾಲು ಎಂದು ಸ್ವೀಕರಿಸಿ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

ಸ್ತ್ರೀಯರು ಬಲಿಷ್ಠರಾದಾಗ ಸಮಾಜ, ದೇಶವು ಬಲಿಷ್ಠವಾಗುತ್ತದೆ. ಇಂಗ್ಲಿಷ್ ಬಗ್ಗೆ ಭಯ ಇಟ್ಟುಕೊಳ್ಳಬೇಡಿ. ಕನ್ನಡ ಜೊತೆಗೆ ವಿವಿಧ ಭಾಷೆಗಳ ಸಂವಹನ ಕಲೆ ಬೆಳೆಸಿಕೊಳ್ಳಬೇಕು. ಸ್ವಾತಂತ್ರೃ ಹೋರಾಟದಲ್ಲಿ ಹೆಣ್ಣು ಮಕ್ಕಳ ಪಾತ್ರವು ಹಿರಿದಾಗಿದೆ. ಅವರ ಚರಿತ್ರೆ ಅಧ್ಯಯನ ಮಾಡಬೇಕು. ನಮ್ಮ ಜಿಲ್ಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಆರಂಭಿಸುವ ಚಿಂತನೆ ಇದೆ ಎಂದ ಅವರು, ವಿಜಯವಾಣಿ, ದಿಗ್ವಿಜಯ ಸುದ್ದಿವಾಹಿನಿಯವರು ಮಾಡಿರುವ ಈ ಹೊಸ ಪ್ರಯತ್ನಕ್ಕೆ ಅಭಿನಂದನೆಗಳು ಎಂದು ಶುಭ ಹಾರೈಸಿದರು.

ಮಾಧವ ಸೇವಾ ಕೇಂದ್ರದ ಅಧ್ಯಕ್ಷ ನಾಗರಾಜ ಹದ್ಲಿ ಮಾತನಾಡಿ, ಇಂದು ದೇಶಭಕ್ತಿ, ನಾಡ ನಿಷ್ಠೆಯ ಬಗ್ಗೆ ನಾವೆಲ್ಲ ಜಾಗೃತರಾಗಬೇಕಿದೆ. ಮಕ್ಕಳಲ್ಲಿ ಇತಿಹಾಸ ಹಾಗೂ ಪ್ರಚಲಿತ ವಿದ್ಯಮಾನ ಪ್ರಜ್ಞೆ ಬೆಳೆಸಬೇಕಿದೆ. ಪದ ಬಂಧ ಹಾಗೂ ಪತ್ರಿಕಾ ಕ್ಷೇತ್ರಕ್ಕೂ ಅವಿನಾಭಾವ ನಂಟು ಇದೆ. ಜ್ಞಾನಶಕ್ತಿ ಹೆಚ್ಚಿಸಲು ನಮ್ಮ ಮೂಲ ಭಾಷೆಯ ಬಗ್ಗೆ ಅಭಿಮಾನ ಹೆಚ್ಚಿಸಲು ಪದ ಬಂಧ ಸ್ಪರ್ಧೆಗಳು ಇರಬೇಕು. ಸ್ವಾತಂತ್ರೃಕ್ಕಾಗಿ ಅನೇಕ ಜನ ಮಹನೀಯರು ತ್ಯಾಗ, ಬಲಿದಾನ ಮಾಡಿದ್ದಾರೆ. ಮಹಿಳೆಯರು ಪಾತ್ರ ಅನನ್ಯವಾಗಿತ್ತು. ಭಾರತ ಮಾತಾಕೀ ಜೈ ಅಂದರೆ ಸಾಲದು ನಮ್ಮೊಳಗೆ ಪ್ರತಿ ಕ್ಷಣವು ಅಡಕವಾಗಬೇಕು. ಮಹಾತ್ಮ ಗಾಂಧೀಜಿ, ನೆಹರು, ಇಂದಿರಾಗಾಂಧಿ ಅವರ ಬಗ್ಗೆ ತಿಳಿದುಕೊಳ್ಳಬೇಕು. ಸತ್ಯದ ಇತಿಹಾಸ ಮೇಲೆ ಎಲ್ಲರೂ ಬೆಳಕು ಚೆಲ್ಲಬೇಕಿದೆ ಎಂದು ಹೇಳಿದರು.
ವೈಷ್ಣೋದೇವಿ ಕ್ರಿಯೇಷನ್ಸ್ ಮುಖ್ಯಸ್ಥ, ನಿರ್ಮಾಪಕ ಘನಶಾಮ ಭಾಂಡಗೆ ಮಾತನಾಡಿ, ಒಳ್ಳೆಯ ಕೆಲಸಕ್ಕೆ ಸದಾ ಬೆಂಬಲ ನೀಡುವುದು ಪ್ರಜ್ಞಾವಂತರ ಕರ್ತವ್ಯ. ವಿಜಯವಾಣಿ, ದಿಗ್ವಿಜಯ ಪ್ರಯತ್ನ ಶ್ಲಾಘನೀಯ. ಖಾಸಗಿಗಿಂತ ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸ್ಫೂರ್ತಿದಾಯಕ. ಉನ್ನತ ಸ್ಥಾನ ಅಲಂಕರಿಸುವುದು ಸರ್ಕಾರಿ ಶಾಲೆಯಲ್ಲಿ ಕಲಿತ ಮಕ್ಕಳು ಎನ್ನುವುದು ಹೆಮ್ಮೆಯ ಸಂಗತಿ. ಇಂದು ಕ್ಷೀಣಿಸುತ್ತಿರುವ ಪದಬಂಧವನ್ನು ಮತ್ತೆ ಜಾಗೃತಗೊಳಿಸಲು ಮುಂದಾಗಿರುವುದು ಅಭಿನಂದನಾರ್ಹ. ಕಿತ್ತೂರು ರಾಣಿ ಚನ್ನಮ್ಮ, ಬೆಳವಡಿ ಮಲ್ಲಮ್ಮನಂತ ತ್ಯಾಗಿಗಳು ನಿಜವಾದ ಹಿರೋಗಳು. ಚಲನ ಚಿತ್ರಗಳಲ್ಲಿ ಬರುವವರು ಅಲ್ಲ. ಬಡವರಿಗೆ ಸಹಾಯ ಮಾಡುವ ಹುದ್ದೆ ಅಲಂಕರಿಸಬೇಕು. ಬಹುಮಾನದ ಹಣವನ್ನು ಪುಸ್ತಕ ಖರೀದಿಗೆ ಮೀಸಲಿಡಬೇಕು ಎಂದು ಸಲಹೆ ನೀಡಿದರು.

ಬಾಲಕಿಯರ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರಕಾಶ ಜೀವೂರ ಮಾತನಾಡಿ, ಪದ ಬಂಧ ಹಾಗೂ ಮುದ್ರಣ ಮಾಧ್ಯಮಕ್ಕೂ ನಿಕಟವಾದ ಸಂಬಂಧವಿದೆ. ಶತಮಾನದ ಹಿಂದೆ ವಿದೇಶದಲ್ಲಿ ಪದಬಂಧವನ್ನು ದಿನಪತ್ರಿಕೆಗಳಲ್ಲಿ ಪ್ರಕಟಿಸಿದಾಗ ಭಾರಿ ಬೆಂಬಲ ವ್ಯಕ್ತವಾಯಿತು. ಇಂದು ವಿಶ್ವದ ಪ್ರತಿಯೊಂದು ಭಾಷೆಯ ಪತ್ರಿಕೆಯಲ್ಲಿ ಪಂದ ಬಂಧವನ್ನು ನಿತ್ಯವು ಪ್ರಕಟಿಸಲಾಗುತ್ತದೆ. ಅನೇಕ ಜನ ಸಕ್ರಿಯವಾಗಿ ಭಾಗವಹಿಸುತ್ತಾರೆ ಎಂದರು.
ಮುಖಂಡರಾದ ರಾಘವೇಂದ್ರ ಬಿಸನಾಳ, ಉಪನ್ಯಾಸಕರಾದ ಎಲ್.ಬಿ. ಹಾದಮನಿ, ಪಿ.ಎಚ್. ಚವ್ಹಾಣ, ಜಿ.ಎಂ. ಧೂಪದ, ವಿ.ಜಿ. ಜಡಿಮಠ, ಆರ್.ಎಚ್. ಗಚ್ಚನ್ನವರ ಇತರರು ಇದ್ದರು. ವಿಜಯವಾಣಿ, ದಿಗ್ವಿಯ ಜಿಲ್ಲಾ ವರದಿಗಾರ ಅಶೋಕ ಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿದರು. ದೀಪಾ ಅಂಗಡಿ ಪ್ರಾರ್ಥಿಸಿದರು. ಪಿ.ಎಚ್. ಚವ್ಹಾಣ ಸ್ವಾಗತಿಸಿದರು. ಶಿವಶಂಕರ ಎನ್. ಮುತ್ತಗಿ ನಿರೂಪಿಸಿದರು.

ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಸಾಧನೆ ಸ್ಮರಣೆ

ಕಾರ್ಯಕ್ರಮದಲ್ಲಿ ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಅವರ ಸಾಧನೆ, ಪರಿಶ್ರಮವನ್ನು ನಿರ್ಮಾಪಕ ಘನಶಾಮ ಭಾಂಡಗೆ ಸ್ಮರಿಸಿಕೊಂಡರು. ವಿಆರ್‌ಎಲ್ ಸಂಸ್ಥೆಗಳ ಮೂಲಕ ಸಾವಿರಾರು ಜನರಿಗೆ ಉದ್ಯೋಗ ನೀಡಿ ಆಶ್ರಯ ಕಲ್ಪಿಸಿದ್ದಾರೆ. ಇಂತಹ ಮಹನೀಯರ ಸಾಧನೆ ತಾವೆಲ್ಲ ಅನುಸರಿಸಿ ಉನ್ನತ ಸಾಧನೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.