ಮಂಗಳೂರಿನ ವಿವಿಧ ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಗಳಲ್ಲಿ ನಡೆದ ಮೂರು ಅಪಘಾತ ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ಅಪರಾಧ ಸಾಬೀತಾಗಿ ಶಿಕ್ಷೆಯಾಗಿದೆ.
ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ 2019 ಫೆ.13ರಂದು ದಾಖಲಾದ ಮಾರಣಾಂತಿಕ ರಸ್ತೆ ಅಪಘಾತದಲ್ಲಿ ವಿಜಯ ಕುಮಾರ್ ಜಾಧವ್ ಎಂಬಾತನ ವಿರುದ್ಧ ತನಿಖಾಧಿಕಾರಿಗಳಾದ ಎಚ್.ಶಿವಪ್ರಕಾಶ್ ಮತ್ತು ಟಿ.ಅಶೋಕ್ ಕುಮಾರ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಲಾಗಿತ್ತು. 3ನೇ ಜೆಎಂಎಫ್‌ಸಿ ನ್ಯಾಯಾಧೀಶೆ ತಾರಾ ಕೆ.ಸಿ. ಅವರು ಆರೋಪಿಗೆ 6 ತಿಂಗಳ ಜೈಲು ಶಿಕ್ಷೆ ಹಾಗೂ 2 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ 2014 ಅ.19ರಂದು ದಾಖಲಾದ ಮಾರಣಾಂತಿಕ ರಸ್ತೆ ಅಪಘಾತದಲ್ಲಿ ಆರೋಪಿಗಳಾದ ಸಿ.ಪಿ.ಸಾಜಿ ಮತ್ತು ವಿರನ ಕುಟ್ಟಿ ಅವರ ವಿರುದ್ಧ ತನಿಖಾಧಿಕಾರಿಗಳಾದ ಸುರೇಶ್ ಕುಮಾರ್ ಹಾಗೂಎ.ಎಂ.ನಟರಾಜ್ ಅವರು 2ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಅಂಜಲಿ ಶರ್ಮಾ ಆ.11ರಂದು ಸಿ.ಜಿ.ಸಾಜಿಗೆ 2ವರ್ಷ ಜೈಲು ಶಿಕ್ಷೆ, 14,500 ರೂ. ದಂಡ, ದಂಡ ತೆರಲು ತಪ್ಪಿದರೆ 4 ತಿಂಗಳು 10 ದಿನಗಳ ಕಾಲ ಸಾದಾ ಶಿಕ್ಷೆ ಅನುಭವಿಸಲು ಆದೇಶ ನೀಡಿದ್ದಾರೆ. 2ನೇ ಆರೋಪಿ ವಿರನ್ ಕುಟ್ಟಿ ವಿಚಾರಣೆ ವೇಳೆ ಮೃತಪಟ್ಟಿದ್ದ.
ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ 2020 ಜೂನ್ 14ರಂದು ದಾಖಲಾದ ಮಾರಣಾಂತಿಕ ರಸ್ತೆ ಅಪಘಾತದಲ್ಲಿ ಆರೋಪಿ ಸತೀಶ್ ಎಸ್.ಮೇಲೆ ತನಿಖಾಧಿಕಾರಿ ಮೋಹನ್ ಕೊಟ್ಟಾರಿ ಅವರು 2ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ದೋಷಾರೋಪನೆ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶೆ ಅಂಜಲಿ ಶರ್ಮಾ ಅವರು ಆ.19ರಂದು ಆರೋಪಿಗೆ 6 ತಿಂಗಳ ಕಾಲ ಜೈಲು ಶಿಕ್ಷೆ ಜತೆಗೆ 9500 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡ ತೆರಲು ತಪ್ಪಿದರೆ 3 ತಿಂಗಳು 20 ದಿನಗಳ ಕಾಲ ಸಾದಾ ಶಿಕ್ಷೆ ನುಭವಿಸಲು ಆದೇಶ ನೀಡಿದ್ದಾರೆ.