ಜಿಲ್ಲೆ

ಅಪಘಾತದಲ್ಲಿ ಮೃತನಾಗಿದ್ದ ಯುವಕನ ಅಂಗಾಂಗ ದಾನ: ಮಾನವೀಯತೆ ಮೆರೆದ ಚಿಕ್ಕಮಂಡ್ಯ ಗ್ರಾಮದ ಕುಟುಂಬ

ಕೆ.ಎನ್.ರಾಘವೇಂದ್ರ
ಮಂಡ್ಯ: ಮೂರು ದಿನಗಳ ಹಿಂದೆ ಸಂಭವಿಸಿದ ಅಪಘಾತದಲ್ಲಿ ತೀವ್ರ ಗಾಯಗೊಂಡು ಶನಿವಾರ ಮೃತಪಟ್ಟಿದ್ದ ಯುವಕನ ಕುಟುಂಬದವರು ಮೃತ ಯುವಕ ಅಂಗಾಂಗಗಳನ್ನು ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.
ತಾಲೂಕಿನ ಚಿಕ್ಕಮಂಡ್ಯ ಗ್ರಾಮದ ನಿವಾಸಿ ಗಿರೀಶ್ ಅಲಿಯಾಸ್ ಸಾಧು ಮಹಾರಾಜ್(೩೨) ಮೃತ ಯುವಕ. ಶುಕ್ರವಾರ ರಾತ್ರಿ ಮಂಡ್ಯ-ಚಿಕ್ಕಮಂಡ್ಯ ನಡುವಿನ ರಸ್ತೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆಗಳ ಕಚೇರಿ ಎದುರು ಬೈಕ್‌ನಿಂದ ಆಯತಪ್ಪಿ ಬಿದ್ದಿದ್ದನು. ತೀವ್ರ ಗಾಯಗೊಂಡಿದ್ದ ಈತನನ್ನು ಬೆಂಗಳೂರಿಗೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಶನಿವಾರ ಗಿರೀಶ್ ಕೊನೆಯುಸಿರೆಳೆದಿದ್ದಾನೆ.
ಸಾವಿನ ಹಿನ್ನೆಲೆಯಲ್ಲಿ ಆತನ ಅಂಗಾಂಗಗಳ ದಾನದ ಬಗ್ಗೆ ಕುಟುಂಬದವರೊಂದಿಗೆ ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಪ್ರಸ್ತಾಪಿಸಿದ್ದಾರೆ. ಅದಕ್ಕೆ ಒಪ್ಪಿಗೆ ಸೂಚಿಸಿದ ಕುಟುಂಬದವರು, ಗಿರೀಶನ ಕಣ್ಣುಗಳು, ಹೃದಯ ಮತ್ತು ಕಿಡ್ನಿಯನ್ನು ದಾನ ಮಾಡಿ, ಮಗನ ಸಾವಿಗೆ ಸಾರ್ಥಕತೆ ತಂದುಕೊಟ್ಟಿದ್ದಾರೆ. ಸಾವಿನ ನಂತರವೂ ಮತ್ತೊಬ್ಬರ ಬದುಕಿಗೆ ಬೆಳಗಾದ ಗಿರೀಶ್ ಮತ್ತವನ ಕುಟುಂಬದ ತ್ಯಾಗ, ಮಾನವೀಯತೆಗೆ ಗ್ರಾಮಸ್ಥರೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯಲ್ಲೂ ಗಿರೀಶನ ಪಾರ್ಥಿವ ಶರೀರವನ್ನು ಹೊರಗೆ ತರುತ್ತಿದ್ದಂತೆ ಅಲ್ಲಿನ ಸಿಬ್ಬಂದಿ ಮತ್ತು ಸಾರ್ವಜನಿಕರು ಚಪ್ಪಾಳೆ ತಟ್ಟುತ್ತಾ ಗಿರೀಶ್ ಸಾವಿನ ಸಾರ್ಥಕತೆಯನ್ನು ಕೊಂಡಾಡಿದ್ದಾರೆ.
ಸಾವಿನ ನಂತರವೂ ಬೇರೆಯವ ಮೂಲಕ ಬದುಕಿರುವ ಗಿರೀಶನ ಬಗ್ಗೆ ಹೆಮ್ಮೆ ಪಡುತ್ತಿರುವ ಸ್ನೇಹಿತರ, ಗಿರೀಶನ ಫೋಟೋ ಮತ್ತು ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಶ್ರದ್ದಾಂಜಲಿ ಸೂಚಿಸುತ್ತಿದ್ದಾರೆ. ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಸೆಂಟ್ರಲ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.