ವಿಜಯಪುರ: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ತೆರಳುವಾಗ ಸಂಭವಿಸಿದ ರಸ್ತೆ ಅಪಘಾತದಲ್ಲಿ ಓರ್ವ ಸ್ಥಳದಲ್ಲಿಯೇ ಅಸುನೀಗಿದ್ದು, ಮೂವರು ವಿದ್ಯಾರ್ಥಿನಿಯರು ಗಾಯಗೊಂಡಿದ್ದಾರೆ.
ಇಲ್ಲಿನ ಕುಮಟಗಿ ತಾಂಡಾ ಬಳಿ ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದೆ. ಸ್ಥಳೀಯ ನಿವಾಸಿ ವೆಂಕು ಚವಾಣ್ ಸ್ಥಳದಲ್ಲಿಯೇ ಅಸುನೀಗಿದ ಬೈಕ್ ಸವಾರ. ಐಶ್ವರ್ಯಾ ಚವಾಣ್, ಪ್ರೀತಿ ಚವಾಣ್ ಮತ್ತು ಶ್ವೇತಾ ರಾಠೋಡ ಗಾಯಗೊಂಡ ವಿದ್ಯಾರ್ಥಿನಿಯರು. ಸದ್ಯ ಗಾಯಾಳು ವಿದ್ಯಾರ್ಥಿನಿಯರು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯವಿಲ್ಲವೆಂದು ವೈದ್ಯರು ತಿಳಿಸಿದ್ದಾರೆ.
ಕಗ್ಗೋಡ ಪ್ರೌಢಶಾಲೆಯಲ್ಲಿ ಸ್ಥಾಪಿಸಲಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕೇಂದ್ರಕ್ಕೆ ವೆಂಕು ಚವಾಣ್ ಮೂವರು ವಿದ್ಯಾರ್ಥಿನಿಯರನ್ನು ಕರೆದೊಯ್ಯುತ್ತಿದ್ದನು. ಐಶ್ವರ್ಯಾ ಚವಾಣ್, ಪ್ರೀತಿ ಚವಾಣ್ ಮತ್ತು ಪಕ್ಕದ ಮನೆಯ ಶ್ವೇತಾ ರಾಠೋಡ ಇವರನ್ನು ಒಂದೇ ಬೈಕ್ ಮೇಲೆ ಕೂರಿಸಿಕೊಂಡು ಹೋಗುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ವೆಂಕು ಸ್ಥಳದಲ್ಲಿಯೇ ಅಸುನೀಗಿದ್ದಾನೆ. ಗಾಯಾಳು ವಿದ್ಯಾರ್ಥಿನಿಯರನ್ನು ಕೂಡಲೇ ವಿಜಯಪುರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಎಂ.ಬಿ. ಪಾಟೀಲರು ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರಲ್ಲದೇ ಆತ್ಮಸ್ಥೈರ್ಯ ತುಂಬಿದರು. ವಿದ್ಯಾರ್ಥಿಗಳು ಸಂಪೂರ್ಣ ಚೇತರಿಸಿಕೊಳ್ಳುವವರೆಗೆ ಅವರಿಗೆ ಉಚಿತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದರು.