ಹನೂರು: ಕ್ಷೇತ್ರ ವ್ಯಾಪ್ತಿಯ ತೆಳ್ಳನೂರು - ಬಂಡಳ್ಳಿ ಮಾರ್ಗದಲ್ಲಿ ಭಾನುವಾರ ರಾತ್ರಿ ನಿಶ್ಚಿತಾರ್ಥ ಮುಗಿಸಿ ಗ್ರಾಮಕ್ಕೆ ವಾಪಾಸ್ಸಾಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಮಗುಚಿ ನಿರ್ವಾಹಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, 60ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಕೊಳ್ಳೇಗಾಲ ತಾಲೂಕಿನ ದೊಡ್ಡಿಂದುವಾಡಿ ಗ್ರಾಮದ ನವೀನ್‌ಕುಮಾರ್ (34) ಮೃತ ಕಂಡಕ್ಟರ್. ಘಟನೆ ವಿವರ: ಶಾಗ್ಯ ಗ್ರಾಮದ ನಿಂಗಣ್ಣ ಎಂಬುವರ ಪುತ್ರ ಸಿದ್ದು ಅವರಿಗೆ ಭಾನುವಾರ ಕನಕಪುರ ತಾಲೂಕು ಹನಿಯೂರು ಗ್ರಾಮದಲ್ಲಿ ನಿಶ್ಚಿತಾರ್ಥ ನೆರವೇರಿತು. 70ಕ್ಕೂ ಹೆಚ್ಚು ಸಂಬಂಧಿಕರು ನಿಶ್ಚಿತಾರ್ಥ ಮುಗಿಸಿ ರಾತ್ರಿ ಸುಮಾರು 8ರ ವೇಳೆಯಲ್ಲಿ ಗ್ರಾಮಕ್ಕೆ ವಾಪಾಸ್ಸಾಗುತ್ತಿದ್ದರು. ಈ ವೇಳೆ ತೆಳ್ಳನೂರು - ಬಂಡಳ್ಳಿ ಮಾರ್ಗದ ಮಹದೇಶ್ವರ ಸ್ವಾಮಿ ದೇಗುಲದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರಣ ಬಸ್ ರಸ್ತೆ ಬದಿಗೆ ಮಗುಚಿತು.
ಸ್ಥಳಕ್ಕೆ ಧಾವಿಸಿದ ಬಂಡಳ್ಳಿ ಹಾಗೂ ಶಾಗ್ಯ ಗ್ರಾಮಸ್ಥರು ಜೆಸಿಬಿ ಸಹಾಯದಿಂದ ಬಸ್ಸನ್ನು ಎತ್ತಿ ಗಾಯಗೊಂಡ 50 ಕ್ಕೂ ಹೆಚ್ಚು ಜನರನ್ನು ತುರ್ತು ಹಾಗೂ ಗೂಡ್ಸ್ ವಾಹನದ ಮೂಲಕ ಕೊಳ್ಳೇಗಾಲ ಸರ್ಕಾರಿ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲಿಸಿದರು. ತೀವ್ರ ಗಾಯಗೊಂಡ ಬಸವರಾಜು, ಮನು, ರಾಚಯ್ಯ, ಸಿದ್ದಮ್ಮ, ಸಿದ್ದಯ್ಯ ಸೇರಿದಂತೆ 22 ಜನರಿಗೆ ಪ್ರಥಮ ಚಿಕಿತ್ಸೆ ನಂತರ ಮಂಗಳವಾರ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.